Washington: ಅಮೆರಿಕದ (America USA) ವಾಷಿಂಗ್ಟನ್‌ನಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಪೋಷಕರು ಹಾಗೂ ತನ್ನ ಮೂವರು ಒಡಹುಟ್ಟಿದವರನ್ನು ನಿರ್ದಯವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಅಷ್ಟೇ ಅಲ್ಲದೆ, ತಾನೇ ಪೊಲೀಸರಿಗೆ ಕರೆ ಮಾಡಿದ್ದ ಆತ, ಮೃತರಲ್ಲಿ ಒಬ್ಬಾತ ಎಲ್ಲರನ್ನೂ ಕೊಂದು ತಾನೂ ಜೀವ ಕಳೆದುಕೊಂಡಿದ್ದಾನೆ ಎಂದು ಹೇಳಿದ್ದ.
ಅಪ್ರಾಪ್ತ ವಯಸ್ಕನಾಗಿರುವ ಕಾರಣದಿಂದ ಕೋರ್ಟ್ ದಾಖಲೆಗಳಲ್ಲಿ ಬಾಲಕನ ಹೆಸರನ್ನು ಬಹಿರಂಗಪಡಿಸಿಲ್ಲ. ಆತನ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಫಾಲ್ ಸಿಟಿಯಲ್ಲಿನ ಮನೆಯೊಂದರಲ್ಲಿ ಸೋಮವಾರ ಮುಂಜಾನೆ 5 ಗಂಟೆ ವೇಳೆಗೆ ಇಬ್ಬರು ವಯಸ್ಕರು ಮತ್ತು 7, 9 ಹಾಗೂ 13 ವರ್ಷದ ಮೂವರು ಮಕ್ಕಳ ಶವಗಳು ಪತ್ತೆಯಾಗಿದ್ದವು. ಸಿಯಾಟಲ್‌ನಿಂದ 25 ಕಿಮೀ ದೂರದಲ್ಲಿನ ಲೇಕ್ ಅಲೈಸ್ ರಸ್ತೆಯ ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು.
ಬಾಲಕ ಎಲ್ಲರನ್ನೂ ಕೊಲ್ಲಲು ಗುಂಡಿನ ದಾಳಿ ನಡೆಸಿದ್ದರೂ, ಗಾಯಗೊಂಡಿದ್ದ 11 ವರ್ಷದ ಆತನ ಸಹೋದರಿ, ಸತ್ತಂತೆ ನಾಟಕವಾಡಿ ಜೀವ ಉಳಿಸಿಕೊಂಡಿದ್ದಳು.
ಕಿಟಕಿ ಮೂಲಕ ಮನೆಯಿಂದ ಹೊರಗೆ ತಪ್ಪಿಸಿಕೊಂಡಿದ್ದ ಆಕೆ, ಪಕ್ಕದ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಳು ಎಂದು ಕಿಂಗ್ ಕೌಂಟಿ ಪೊಲೀಸ್ ಇಲಾಖೆಯ ಪತ್ತೇದಾರರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಆದರೆ ಆತನ ಹೇಳಿಕೆ ಸುಳ್ಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿಯೇ ಒಬ್ಬರ ಮೇಲೆ ಹತ್ಯಾಕಾಂಡದ ಆಪಾದನೆ ಹೊರಿಸಿ ಪಾರಾಗಲು ಹಂತಕ ಬಾಲಕ ಪ್ರಯತ್ನಿಸಿದ್ದ ಎಂದು ಕೋರ್ಟ್‌ಗೆ ನೀಡಿರುವ ದಾಖಲೆ ಹೇಳಿದೆ.
ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಶಂಕಿತ ಆರೋಪಿಯು ಬಹಳ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದು, ಮತ್ತೊಬ್ಬ ಸಹೋದರಿಯನ್ನು ಕೊಲ್ಲಲು ಪ್ರಯತ್ನಿಸಿದ್ದ.
ನಂತರ ಮೊದಲೇ ಯೋಜನೆ ನಡೆಸಿದ್ದಂತೆ, 13 ವರ್ಷದ ತನ್ನ ಸಹೋದರ ಎಲ್ಲರನ್ನೂ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸಲು ದೃಶ್ಯ ಕೂಡ ಸಿದ್ಧಪಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.