Delhi: ಛತ್ತೀಸ್ ಗಢದಲ್ಲಿ ಇಂದು 170 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿರುವಂತೆ, ಇದು ನಕ್ಸಲರ ವಿರುದ್ಧದ ಹೋರಾಟದಲ್ಲಿ ಒಂದು ಮಹತ್ವದ ಮೈಲಿಗಲ್ಲು.
ಸುಕ್ಮಾ ಜಿಲ್ಲೆಯಲ್ಲಿ ಹತ್ತು ಮಹಿಳೆಯರು ಸೇರಿ 27 ನಕ್ಸಲರು ಶರಣಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಮಹಾರಾಷ್ಟ್ರದ ಗಢ್ಚಿರೋಲಿ ಜಿಲ್ಲೆಯಲ್ಲಿ 61 ಮಾವೋವಾದಿಗಳು ಶರಣಾಗಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ಕೊನೆಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅಮಿತ್ ಶಾ ಹೇಳಿರುವಂತೆ, ನಕ್ಸಲಿಸಂ ಕೊನೆಯ ಹಂತದಲ್ಲಿದೆ.
ಶರಣಾಗುವವರಿಗೆ ಸಂದೇಶ: “ನಕ್ಸಲಿಸಂ ಹಾದಿಯಲ್ಲಿರುವವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕು. ಶರಣಾಗಲು ಬಯಸುವವರನ್ನು ನಾವು ಸ್ವಾಗತಿಸುತ್ತೇವೆ. ಆದರೆ ಬಂದೂಕು ಹಿಡಿಯುವವರು ನಮ್ಮ ಭದ್ರತಾ ಪಡೆಗಳ ಕೋಪಕ್ಕೆ ಗುರಿಯಾಗುತ್ತಾರೆ,” ಎಂದು ಶಾ ಎಚ್ಚರಿಸಿದ್ದಾರೆ.
- ಅವರು ಶರಣಾದವರ ನಿರ್ಧಾರವನ್ನು ಮೆಚ್ಚಿದ್ದಾರೆ ಮತ್ತು ದೇಶದ ಸಂವಿಧಾನದ ಮೇಲಿನ ನಂಬಿಕೆ ಇಟ್ಟು ಹಿಂಸೆ ತ್ಯಜಿಸಿರುವುದಕ್ಕೆ ಗೌರವ ವ್ಯಕ್ತಪಡಿಸಿದ್ದಾರೆ.
- ಅಬುಜ್ಮರ್ ಮತ್ತು ಉತ್ತರ ಬಸ್ತಾರ್ ನಕ್ಸಲ್ ಮುಕ್ತ ಪ್ರದೇಶಗಳಾಗಿ ಘೋಷಿಸಲಾಗಿದೆ.
- ದಕ್ಷಿಣ ಬಸ್ತಾರ್ನಲ್ಲಿ ಇನ್ನೂ ನಕ್ಸಲ್ವಾದದ ಕೆಲವು ಕುರುಹುಗಳಿವೆ, ಅವು ಶೀಘ್ರದಲ್ಲೇ ಅಳಿಸಿಹಾಕಲಾಗುವುದು ಎಂದು ಶಾ ತಿಳಿಸಿದ್ದಾರೆ.
ಸಂಖ್ಯೆಗಳ ಮಾಹಿತಿ
- 2024 ಜನವರಿಯಿಂದ ಈವರೆಗೆ ಛತ್ತೀಸ್ಗಢದಲ್ಲಿ 2,100 ನಕ್ಸಲರು ಶರಣಾಗಿದ್ದಾರೆ.
- 1,785 ಜನರನ್ನು ಬಂಧಿಸಲಾಗಿದೆ.
- ಸುಮಾರು 477 ನಕ್ಸಲರನ್ನು ಕೊಂದಿದ್ದಾರೆ.
ಕಳೆದ ತಿಂಗಳು, ಜಾರ್ಖಂಡ್ ನ ಹಜಾರಿಬಾಗ್‌ನಲ್ಲಿ ಭದ್ರತಾ ಪಡೆಗಳು ಮೂವರು ಪ್ರಮುಖ ನಕ್ಸಲ್ ನಾಯಕರನ್ನು ಹೊಡೆದುರುಳಿಸಿದ್ದರು. ಕುಖ್ಯಾತ ನಕ್ಸಲ್ ನಾಯಕ ರಘುನಾಥ್ ಸಾವನ್ನಪ್ಪಿದ್ದರು. ಅವರು ನಕ್ಸಲ್ವಾದವನ್ನು ರಾಜ್ಯದಾದ್ಯಾಂತ ಹರಡಿದ್ದರು. ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 39ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.







