Dehradun: 2000ರಲ್ಲಿ ಉತ್ತರಾಖಂಡ (Uttarakhand) ರಾಜ್ಯ ರಚನೆಯಾದ ನಂತರ, ವಿಪತ್ತುಗಳ ಸಮಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಸೇರಿದಂತೆ, ವಿವಿಧ ಸೇವೆಗಳನ್ನು ವಾಯುಪಡೆಯಿಂದ ಪಡೆಯಲಾಗಿದೆ. ಇವುಗಳಿಗೆ ಪ್ರತಿಯಾಗಿ 200 ಕೋಟಿ ರೂ. ಪಾವತಿಸಬೇಕೆಂದು ಉತ್ತರಾಖಂಡ ಸರ್ಕಾರಕ್ಕೆ ಭಾರತೀಯ ವಾಯುಪಡೆ (Indian Air Force IAF) ಪತ್ರ ಕಳುಹಿಸಿದೆ.
ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಅವರ ಮಾಹಿತಿ ಪ್ರಕಾರ, ಬಾಕಿ ಪಾವತಿಗಳನ್ನು ಮುಂದಿನ ಸಮಯದಲ್ಲಿ ಪಾವತಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
200 ಕೋಟಿ ರೂ. ಬಿಲ್‌ನಲ್ಲಿ 67 ಕೋಟಿ ರೂ.ಗಳು ಕೇವಲ ವಿಪತ್ತು ನಿರ್ವಹಣೆಗೆ ಸಂಬಂಧಿಸಿದೆ. 24 ಕೋಟಿ ರೂ.ಗಳನ್ನು ಈಗಾಗಲೇ ಪಾವತಿಸಲಾಗಿದೆ ಮತ್ತು ಇನ್ನೂ 28 ಕೋಟಿಯನ್ನು ಪರಿಶೀಲಿಸಲಾಗುತ್ತಿದೆ.
ಪ್ರವಾಸೋದ್ಯಮ, ಲೋಕೋಪಯೋಗಿ, ಸೈನಿಕ ಕಲ್ಯಾಣ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಬಾಕಿ ಪಾವತಿಗಳ ಬಗ್ಗೆ IAF ಹಲವು ಬಾರಿ ಉತ್ತರಾಖಂಡ ಸರ್ಕಾರಕ್ಕೆ ಪತ್ರ ಕಳುಹಿಸಿದೆ. ಮೊದಲನೇ ಪತ್ರ ಆಗಸ್ಟ್ 27ರಂದು, ನಂತರ ಸೆಪ್ಟೆಂಬರ್ 18 ಮತ್ತು 19 ರಂದು ರಿಮೈಂಡರ್ ಕಳುಹಿಸಲಾಗಿತ್ತು. ಆದರೆ, ಬಾಕಿ ಪಾವತಿಗೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಉತ್ತರಾಖಂಡದಲ್ಲಿ ನೈಸರ್ಗಿಕ ವಿಪತ್ತುಗಳು: IAF ಹೆಲಿಕಾಪ್ಟರ್‌ಗಳು ಕಾಡಿನ ಬೆಂಕಿ, ಕೇದಾರನಾಥ ದುರಂತ, ಭೂಕುಸಿತ ಮತ್ತು ಭೂಕಂಪಗಳಂತಹ ವಿಪತ್ತುಗಳಲ್ಲಿ ಪರಿಹಾರ ಕಾರ್ಯಚರಣೆಗಳನ್ನು ನಡೆಸಿವೆ. 67 ಕೋಟಿಯ ಬಾಕಿಯನ್ನು ಪಾವತಿಸಲು ವಿಪತ್ತು ನಿರ್ವಹಣಾ ಇಲಾಖೆ ಇತರ ಇಲಾಖೆಗಳೊಂದಿಗೆ ಸಮನ್ವಯ ನಡೆಸುತ್ತಿದೆ. IAF ಕಳುಹಿಸಿದ 200 ಕೋಟಿ ರೂಪಾಯಿ ಮೌಲ್ಯದ ಬಿಲ್‌ಗಳು ಸುಮಾರು 20 ವರ್ಷ ಹಳೆಯದಾಗಿರುವ ಕಾರಣ ಪರಿಶೀಲನೆ ನಡೆಯುತ್ತಿದೆ.