
Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ತಮ್ಮ ಸುಂಕ ನೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಏಪ್ರಿಲ್ 2ರಿಂದ, ವೆನುಜುವೇಲಾ ದೇಶದಿಂದ ತೈಲ (Venezuelan oil) ಖರೀದಿಸಿದರೆ ಶೇ. 25ರಷ್ಟು ಸುಂಕ ವಿಧಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಟ್ರಂಪ್ ಅವರ ಪ್ರಕಾರ, ವೆನುಜುವೇಲಾ ಅಪರಾಧಿಗಳ ಗುಂಪುಗಳನ್ನು ಅಮೆರಿಕಕ್ಕೆ ಕಳುಹಿಸುತ್ತಿದೆ. ಭೂಗತಪಾತಕರು, ಲೂಟಿಕೋರರು, ಮತ್ತು ಗ್ಯಾಂಗ್ಸ್ಟರ್‌ಗಳು ಅಮೆರಿಕಕ್ಕೆ ಸೇರುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಈ ಹೊಸ ಸುಂಕದ ಮೂಲಕ ವೆನುಜುವೇಲಾದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ವೆನುಜುವೇಲಾದ ಪ್ರಮುಖ ತೈಲ ಖರೀದಿ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದ್ದು, ಈ ನಿರ್ಧಾರದಿಂದ ಚೀನಾದ ಮೇಲೆ ನೇರ ಪ್ರಭಾವ ಬೀಳಲಿದೆ. ಈಗಾಗಲೇ ಅಮೆರಿಕ ಚೀನಾದ ಸರಕುಗಳ ಮೇಲೆ ಶೇ. 20ರಷ್ಟು ಸುಂಕ ವಿಧಿಸಿದೆ.
ವೆನುಜುವೇಲಾ ತೈಲ ಖರೀದಿ ಮಾಡುವ ದೇಶಗಳಲ್ಲಿ ಭಾರತವೂ ಇದೆ. ಆದರೆ, ಭಾರತದ ಒಟ್ಟು ತೈಲ ಆಮದಿಯಲ್ಲಿ ವೆನುಜುವೇಲಾದ ಪಾಲು ಕೇವಲ ಶೇ. 1.5ರಷ್ಟು ಮಾತ್ರ. ಹೀಗಾಗಿ, ಈ ನಿರ್ಧಾರದಿಂದ ಭಾರತಕ್ಕೆ ಹೆಚ್ಚಿನ ಪರಿಣಾಮವಾಗುವ ಸಾಧ್ಯತೆ ಇಲ್ಲ.