
Aligarh (Uttar Pradesh): ಜ್ಯೂಸ್ ಮಾರಾಟಗಾರ ಮತ್ತು ಬೀಗ ರಿಪೇರಿ ಮಾಡುವ ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ನಂತರ, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವ ಕಾರ್ಮಿಕನಿಗೆ ನೋಟಿಸ್ ನೀಡಲಾಗಿದೆ.
ಅಲಿಘಡದ ಚಂದೌಸ್ ಪ್ರದೇಶದ SBI ಶಾಖೆಯಲ್ಲಿ ನೈರ್ಮಲ್ಯ ಕಾರ್ಮಿಕನಾಗಿ (sweeper) ಕೆಲಸ ಮಾಡುವ ಕರಣ್ ಕುಮಾರ್ ವಾಲ್ಮೀಕಿ ಅವರ ಮನೆಗೆ 33.88 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ನೋಟಿಸ್ ಬಂದಿದೆ. ಅವರು ಕೇವಲ ₹14,200 ಮಾಸಿಕ ಸಂಬಳ ಪಡೆಯುತ್ತಾರೆ. ಕುಟುಂಬದ ಜನರು ಈ ನೋಟಿಸ್ ನೋಡಿ ಆತಂಕಗೊಂಡಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಕರಣ್ ಕುಮಾರ್, “ನನ್ನ ಪ್ಯಾನ್ ಕಾರ್ಡ್ ದುರುಪಯೋಗವಾಗಿದೆ. ನಮ್ಮ ಕುಟುಂಬ ಬಡದು. ಸಹೋದರನೂ ಸ್ವೀಪರ್ ಆಗಿದ್ದಾರೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಶಕ್ತಿ ನಮಗಿಲ್ಲ” ಎಂದು ಹೇಳಿದ್ದಾರೆ.
“ನಾನು ದೆಹಲಿಯ ಸಿಮೆಂಟ್ ಕಂಪನಿ, ಆರ್ಸಿಎಂ ಕಂಪನಿ ಮತ್ತು ಬ್ಯಾಂಕಿನಲ್ಲಿ ಕೆಲಸ ಮಾಡಿದ್ದೆ. ಈ ಸಂಸ್ಥೆಗಳು ನನ್ನ ಪ್ಯಾನ್ ಕಾರ್ಡ್ ಪಡೆದುಕೊಂಡಿದ್ದವು. ಈ ಮೂರು ಸ್ಥಳಗಳಲ್ಲಿ ಯಾರಾದರೂ ದಾಖಲೆ ದುರುಪಯೋಗ ಮಾಡಿದ್ದಾರೆ. ಸರಿಯಾಗಿ ತನಿಖೆ ನಡೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕರಣ್ ಕುಮಾರ್ ಅವರ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಲ್ಲಿ 2019-20ರ ಆರ್ಥಿಕ ವರ್ಷದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು IT ಇಲಾಖೆ ಹೇಳಿದೆ. ಆದ್ದರಿಂದ 33.88 ಕೋಟಿ ತೆರಿಗೆ ವಂಚನೆ ಆಗಿದೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ. ಮಾರ್ಚ್ 31ರೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಇದಕ್ಕೂ ಮುಂಚಿತವಾಗಿ, ಜ್ಯೂಸ್ ಮಾರಾಟಗಾರನಿಗೆ ₹7.79 ಕೋಟಿ ತೆರಿಗೆ ನೋಟಿಸ್ ಹಾಗೂ ಬೀಗ ರಿಪೇರಿ ಮಾಡುವ ವ್ಯಕ್ತಿಗೆ ₹11.11 ಕೋಟಿ ತೆರಿಗೆ ನೋಟಿಸ್ ಜಾರಿಗೆ ಆಗಿತ್ತು. ಇಬ್ಬರೂ ದೂರು ನೀಡಿದ್ದಾರೆ.
ಈ ಪ್ರಕರಣಗಳ ಹಿಂದೆ ಪ್ಯಾನ್ ಕಾರ್ಡ್ ದುರ್ಬಳಕೆ ಇರಬಹುದಾ? ತನಿಖೆ ಅಗತ್ಯ!