Mangaluru: ಜಗತ್ತಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ದೊಡ್ಡ ಸಮಸ್ಯೆ ಉಂಟುಮಾಡುತ್ತಿದೆ. ಇದನ್ನು ನಾಶಮಾಡುವುದು ಸವಾಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪಯೋಗಿಸಿ ಕರಾವಳಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಮೂಲಕ ಹೊಸ ಪ್ರಯೋಗ ಮಾಡಿದ್ದು ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಇರುವ ಸರ್ವೀಸ್ ರಸ್ತೆಗಳ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಾಗಿದೆ. ನಂತೂರಿನಿಂದ ತಲಪಾಡಿ ಮತ್ತು ಮುಕ್ಕದಿಂದ ಸಾಸ್ತಾನದವರೆಗಿನ ಸುಮಾರು 48 ಕಿ.ಮೀ. ರಸ್ತೆಗೆ ಡಾಮರ್ ಕೆಲಸ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲಾಗಿದೆ. ಇದರಿಂದ ನೂರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಉಪಯೋಗ ದೊರಕಿದೆ.
ದ.ಕ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹಿಸಿದ 170 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಕಡಿಮೆ ಸಾಂದ್ರತೆಯ ಪಾಲಿಥಿನ್ ಬಳಸಿಕೊಂಡು ರಸ್ತೆ ಗಟ್ಟಿತನ ಹೆಚ್ಚಿಸಿ ದೀರ್ಘಬಾಳಿಕೆಯನ್ನು ತಲುಪಿಸಿದೆ.
ಸಾಮಾನ್ಯವಾಗಿ ಮಳೆ ಹೆಚ್ಚಾಗುವ ಪ್ರದೇಶಗಳಲ್ಲಿ ಡಾಮರ್ ರಸ್ತೆಯಲ್ಲಿ ಹೊಂಡಗುಂಡಿಗಳು ಬೇಗ ಉಂಟಾಗುತ್ತವೆ. ಇದಕ್ಕೆ ಪರಿಹಾರವಾಗಿ NHAI ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರು ಐಆರ್ಸಿ (Indian Road Congress)ಗೆ ವರದಿ ಸಲ್ಲಿಸಿ, ಕಡಿಮೆ ಸಾಂದ್ರತೆಯ ಪಾಲಿಥಿನ್ ಬಳಸಲು ಅನುಮತಿ ಪಡೆದಿದ್ದಾರೆ.
ಈ ಹೊಸ ತಂತ್ರದಲ್ಲಿ, ಪ್ಲಾಸ್ಟಿಕ್ ಸ್ಟಡ್ ಅನ್ನು ಬಿಸಿ ಮಾಡಿ ಜಲ್ಲಿಕಲ್ಲಿಗೆ ಕೋಟ್ ಮಾಡಿ, ಟಾರ್ ಹಾಕಿ ಡಾಮರೀಕರಣ ಮಾಡಲಾಗಿದೆ.
ಮಂಗಳೂರು ರಿಸೋರ್ಸಸ್ ಮ್ಯಾನೇಜ್ಮೆಂಟ್ ಕಂಪೆನಿ ಈ ರಸ್ತೆಯ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ, ವ್ಯವಸ್ಥಿತಗೊಳಿಸುವ ಕೆಲಸ ಮಾಡಿದ್ದಾರೆ. ಜನವರಿಯಿಂದ ಮೇ ನಡುವೆ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ (ಕ್ಯಾರಿಬ್ಯಾಗ್, ಪ್ಯಾಕೇಜಿಂಗ್ ಕವರ್ಗಳು) ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ.
NHAI ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಹೇಳಿದ್ದಾರೆ, “ನಾವು 48 ಕಿ.ಮೀ. ಸರ್ವೀಸ್ ರೋಡ್ಗೆ 120 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಳಸಿದ್ದೇವೆ. ತಲಪಾಡಿ–ನಂತೂರು ಮತ್ತು ಮುಕ್ಕ–ಸಾಸ್ತಾನದವರೆಗಿನ ರಸ್ತೆಗೆ ಪ್ಲಾಸ್ಟಿಕ್ ಉಪಯೋಗಿಸಿದ್ದು, ರಸ್ತೆ ದೀರ್ಘಬಾಳಿಕೆಯುಳ್ಳದು ಮತ್ತು ಗುಣಮಟ್ಟ ಉತ್ತಮವಾಗಿದೆ.”
ಮಂಗಳೂರು ರಿಸೋರ್ಸಸ್ ಎಂಡಿ ದಿಲ್ ರಾಜ್ ಆಳ್ವ ಹೇಳಿದರು, “ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ಟಡ್ ಮಾಡಿ ನೀಡಿದ್ದೆವು. NHAI ಅದನ್ನು ಬಳಸಿಕೊಂಡು ಡಾಮರೀಕರಣ ಮಾಡಿದ್ದಾರೆ. ಇದರ ಗುಣಮಟ್ಟ ಉತ್ತಮವಾಗಿದೆ ಮತ್ತು ನಮಗೂ ಹೆಮ್ಮೆ”