ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ರಾಬರ್ಟ್ ಕೆನಡಿ ಜೂನಿಯರ್ ಅವರನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿಯಾಗಿ (HHS) ನೇಮಿಸಿದ ಕ್ರಮವನ್ನು 77 ನೊಬೆಲ್ ಪುರಸ್ಕೃತರು ಖಂಡಿಸಿದ್ದಾರೆ. ಅವರು ಡಿಸೆಂಬರ್ 9ರಂದು ಯುಎಸ್ ಸೆನೆಟ್ ಗೆ ಬಹಿರಂಗ ಪತ್ರವನ್ನು ಕಳುಹಿಸಿ, ಈ ನೇಮಕಾತಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ವೈದ್ಯಕೀಯ, ರಸಾಯನಶಾಸ್ತ್ರ, ಭೌತಶಾಸ್ತ್ರ, ಮತ್ತು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದ 77 ವಿಜ್ಞಾನಿಗಳು ಸಹಿ ಮಾಡಿದ ಈ ಪತ್ರದಲ್ಲಿ, ರಾಬರ್ಟ್ ಕೆನಡಿಗೆ ಈ ಹುದ್ದೆ ನೀಡಿದರೆ ಸಾರ್ವಜನಿಕರ ಆರೋಗ್ಯ ಅಪಾಯಕ್ಕೊಳಗಾಗುತ್ತದೆ ಎಂದು ಹೇಳಿದ್ದಾರೆ. 2023ರ ವೈದ್ಯಕೀಯ ನೊಬೆಲ್ ವಿಜೇತ ಡ್ರೂ ವೈಸ್ಮನ್ ಸಹ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
ರಾಬರ್ಟ್ ಕೆನಡಿಗೆ ವೈದ್ಯಕೀಯ ಅಥವಾ ಸಾರ್ವಜನಿಕ ಆರೋಗ್ಯದ ಯಾವುದೇ ಅನುಭವವಿಲ್ಲ. ಅವರಿಗೆ ಕೋವಿಡ್-19 ಲಸಿಕೆಗಳ ವಿರುದ್ಧ ತಪ್ಪು ಮಾಹಿತಿ ಹರಡಿದ ಹಿನ್ನಲೆ ಇದೆ. ಇವುಗಳ ಜೊತೆಗೆ, ದಡಾರ ಮತ್ತು ಪೋಲಿಯೊ ಮುಂತಾದ ಜೀವ ರಕ್ಷಿಸುವ ಲಸಿಕೆಗಳನ್ನೂ ಅವರು ವಿರೋಧಿಸಿದ್ದಾರೆ.
ಅವರ ನೇಮಕಾತಿ ಸರಿಯಲ್ಲ ಎಂದು ನೊಬೆಲ್ ಪುರಸ್ಕೃತರು ಅಭಿಪ್ರಾಯಪಟ್ಟಿದ್ದು, ಅವರ ನೇಮಕಾತಿಯನ್ನು ಸೆನೆಟ್ ದೃಢೀಕರಿಸುವುದನ್ನು ತಡೆಯುವಂತೆ ಒತ್ತಾಯಿಸಿದ್ದಾರೆ. “ಇದು ಸಾರ್ವಜನಿಕ ಆರೋಗ್ಯ ಮತ್ತು ಲಸಿಕೆಗಳ ಅಗತ್ಯದಲ್ಲಿ ಹಿನ್ನಡೆಯಾಗಲಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಬರ್ಟ್ ಕೆನಡಿ, ಹತ್ಯೆಗೆ ಗುರಿಯಾದ ಯುಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಸೋದರಳಿಯರಾಗಿದ್ದಾರೆ. ಆದರೆ ಈ ಹುದ್ದೆಗೆ ಅವರು ಸೂಕ್ತರಲ್ಲ ಎಂಬ ವ್ಯಾಪಕ ಅಭಿಪ್ರಾಯ ಅಮೆರಿಕಾದಲ್ಲಿ ವ್ಯಕ್ತವಾಗಿದೆ.