Kolar : ಕೋಲಾರ ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ವಿ.ಕಮಲಾ ಅವರು ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೋಮವಾರ ಗ್ರಾಮ ಪಂಚಾಯಿತಿ (Grama Panchayat) ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಗ್ರಾ.ಪಂ ಅಧ್ಯಕ್ಷ ಬಾಬು ಮೌನಿ ಮಾತನಾಡಿ “PDO ಕಮಲಾ ಅವರ ದುರಾಡಳಿತದಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ಗ್ರಾಮ ಸಭೆ, ಗ್ರಾ.ಪಂ ಸಭೆಗಳಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಿದರೂ ಕೆಲಸಗಳು ಆಗುತ್ತಿಲ್ಲ. ಈ ಕುರಿತು ಪ್ರಶ್ನೆ ಮಾಡಿದರೆ ಸಿಬ್ಬಂದಿ ಕೊರತೆ ಎಂದು ಕುಂಟುನೆಪ ಹೇಳುತ್ತಾರೆ. ಇ–ಸ್ವತ್ತು ಸಮಸ್ಯೆ ಸಂಬಂಧ ಪ್ರತಿ ವಾರ ಒಂದೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸಬೇಕೆಂದು ಹಲವು ಬಾರಿ ಮನವಿ ಮಾಡಿದ್ದರು ಪಿಡಿಒ ಒಂದು ಹಳ್ಳಿಗೂ ಭೇಟಿ ಕೊಟ್ಟಿಲ್ಲ. ಬೇಜವಾಬ್ದಾರಿ ಪಿಡಿಒರನ್ನು ವರ್ಗಾವಣೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಗಾಯತ್ರಿ, ಸದಸ್ಯ ರಾದ ರವಿ, ಗೋಪಾಲ್, ವೆಂಕಟೇಶ್, ಭವ್ಯ, ರೂಪಾ, ಶೈಲಜಾ, ಎಂ.ಶಂಕರ್, ಹೇಮಲತಾ, ಎಂ.ಸಿ.ಮುನಿವೆಂಕಟಪ್ಪ, ನಾಗರಾಜ್ ಉಪಸ್ಥಿತರಿದ್ದರು.