Bengaluru, Bangalore : ‘ವಾರ್ಡ್‌ಗಳ ಮರು ವಿಂಗಡಣೆಯಲ್ಲಿ BJP ಹಸ್ತಕ್ಷೇಪ ಮಾಡುತ್ತಿದೆ ಮತ್ತು ಮರುವಿಂಗಡಣಾ ಸಮಿತಿ ನಿಷ್ಕ್ರಿಯವಾಗಿದೆ’ ಎಂದು ಆರೋಪಿಸಿ KPCC ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ (Ramalinga Reddy) ನೇತೃತ್ವದಲ್ಲಿ Congress ನಾಯಕರು BBMP ಕೇಂದ್ರ ಕಚೇರಿ ಮುಂದೆ ಶನಿವಾರ ಪ್ರತಿಭಟಿಸಿದರು.
ಈ ವೇಳೆ ಮಾತಾನಾಡಿದ ರಾಮಲಿಂಗಾ ರೆಡ್ಡಿ ” ಕಾಂಗ್ರೆಸ್ ಗೆಲ್ಲಬಾರದು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯವರೇ ಗೆಲ್ಲಬೇಕು ಎಂಬುದನ್ನೇ ಧ್ಯೇಯವಾಗಿಟ್ಟುಕೊಂಡು ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳನ್ನು ಕರೆದು ಚರ್ಚಿಸಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಬೇಕಿತ್ತಾದರೆ, ಆ ರೀತಿ ಮರು ವಿಂಗಡಣೆ ಆಗುತ್ತಿಲ್ಲ. ಈ ಕೆಲಸವನ್ನು ಬೆಂಗಳೂರಿನ ಮೂವರು ಸಂಸದರು, ಬೆಂಗಳೂರಿನ ಬಿಜೆಪಿ ಶಾಸಕರ ಕಚೇರಿಯಲ್ಲಿ ತಮಗೆ ಬೇಕಾದಂತೆ ಆ ಪಕ್ಷದ ಮತ್ತು ಆರೆಸ್ಸೆಸ್ ನಾಯಕರು ಮಾಡುತ್ತಿದ್ದಾರೆ. ಇದು ಪ್ರಜಾ ಪ್ರಭುತ್ವಕ್ಕೆ ಮಾರಕ ವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್ ವಿಂಗಡಣೆ ಪ್ರಕ್ರಿಯೆಯನ್ನು ನಡೆಸದಿದ್ದರೆ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇವೆ. ಬಳಿಕ, ಕೋರ್ಟ್ ಮೊರೆ ಹೋಗುತ್ತೇವೆ, ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಪಕ್ಷಾತೀತವಾಗಿದ್ದು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು” ಎಂದು ಹೇಳಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕ ಕೃಷ್ಣ ಭೈರೇಗೌಡ, ಯು.ಬಿ. ವೆಂಕಟೇಶ್ ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.