Bagalkote : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (Minimum Support Prices – MSP) ಪ್ರತಿ ಕ್ವಿಂಟಲ್ ಮಾಲ್ದಂಡಿ ಬಿಳಿ ಜೋಳ ₹2758 ಹಾಗೂ ಹೈಬ್ರೀಡ್ ಬಿಳಿ ಜೋಳ ₹2,738 ರಂತೆ ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ (Deputy Commissioner) ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜನವರಿ 1 ರಿಂದ ಮಾರ್ಚ್ 3ರವರೆಗೆ ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಂಟು ಖರೀದಿ ಕೇಂದ್ರಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ರೈತರಿಂದ ಪ್ರತಿ ಎಕರೆಗೆ ಕನಿಷ್ಠ 10 ರಿಂದ, ಗರಿಷ್ಠ 20 ಕ್ವಿಂಟಲ್‌ವರೆಗೆ ಬಿಳಿಜೋಳ ಖರೀದಿಸಲಾಗುತ್ತದೆ. ಒಂದು ಬಾರಿ ಉಪಯೋಗಿಸಿದ ಯೋಗ್ಯ ಇರುವ ಗೋಣಿ ಚೀಲಗಳಲ್ಲಿ ಜೋಳ ತುಂಬಿ ತರಬೇಕು. ಅಂತಹ ಚೀಲಗಳಿಗೆ ₹22 ರಂತೆ ಪ್ರತಿ ಚೀಲಕ್ಕೆ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ. ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಕೆ.ಎಫ್.ಸಿ.ಎಸ್.ಸಿ ಗೋದಾಮು, ಎಪಿಎಂಸಿ ಮುಖ್ಯಮಾರುಕಟ್ಟೆ ಪ್ರಾಂಗಣ, ಬಾಗಲಕೋಟೆ, ಬಾದಾಮಿ, ಕೆ.ಎಫ್.ಸಿ.ಎಸ್.ಸಿ ಗೋದಾಮು ಶಿರೂರ ರಸ್ತೆ ಗುಳೇದಗುಡ್ಡ, ಕೆ.ಎಫ್.ಸಿ.ಎಸ್.ಸಿ ಗೋದಾಮು ಟಿಎಪಿಸಿಎಂಎಸ್ ಕಾಂಪೌಂಡ್ ಬೀಳಗಿ, ಕೆ.ಎಫ್.ಸಿ.ಎಸ್.ಸಿ ಶಾಹ ಗೋದಾಮು ಮುಧೋಳ, ಕೆ.ಎಫ್.ಸಿ.ಎಸ್.ಸಿ ಗೋದಾಮು, ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಹುನಗುಂದ, ಇಳಕಲ್ ಹಾಗೂ ಜಮಖಂಡಿ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅಥವಾ ಜಿಲ್ಲಾ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ ದೂರವಾಣಿ ಸಂಖ್ಯೆ: 08354-295639 ಮತ್ತು 9448496010ಗೆ ಸಂಪರ್ಕಿಸಬಹುದಾಗಿದೆ.