Bengaluru, Karnataka : ಬೆಂಗಳೂರಿನಲ್ಲಿ (Bengaluru) ಇತ್ತೀಚಿನ ವರ್ಷಗಳಲ್ಲಿ ಹಸಿಕಸ ಹಾಗೂ ಒಣಕಸ ಉತ್ಪತ್ತಿ ಪ್ರಮಾಣ ಹೆಚ್ಚಾಗ್ತಿದೆ. BBMP ಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬೆಂಗಳೂರಿನಲ್ಲಿ ಕಸ (garbage) ತೆಗೆದುಹಾಕಲು ಶ್ರಮಿಸುತ್ತಿದೆ. ಆದರೆ, ಇಂದಿಗೂ ಬೆಂಗಳೂರಲ್ಲಿ ಕಸ ಸಮಸ್ಯೆ ಪರಿಹಾರ ಆಗಿಲ್ಲ.
ಅದರಲ್ಲೂ ಹಬ್ಬದ season ಗಳು ಬಂದ್ರಂತೂ ರಸ್ತೆ ಹಾಗೂ ಮಾರುಕಟ್ಟೆ ರೋಡ್ಗಳಲ್ಲಿ ರಾಶಿ-ರಾಶಿ ಕಸ ಬೀಳುತ್ತದೆ. ಇದನ್ನು ಬಿಬಿಎಂಪಿಯು ಮೂರ್ನಾಲ್ಕು ದಿನ ಸ್ವಚ್ಛ ಮಾಡಿದ್ರೂ, ರಸ್ತೆಗಳು ಸ್ವಚ್ಛವಾಗ್ತಿಲ್ಲ. ಈ ನಡುವೆ ಧಾರಾಕಾರ ಮಳೆಯಾಗ್ತಿರೋದು ಕೂಡ ಕಸ ವಿಲೇವಾರಿಗೆ ತೊಡಕಾಗಿದೆ.
ದಸರಾ ಹಬ್ಬದ (Dussehra festival) ಹಿನ್ನೆಲೆ ಆಯುಧ ಪೂಜೆಗಾಗಿ ನಗರದ ಬಹುತೇಕ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಬಾಳೆ ಕಂದು, ಬೂದು ಕುಂಬಳಕಾಯಿ, ಎಲೆಗಳು ಹಾಗೂ ಹೂವು ಮಾರಾಟ ಮಾಡಲಾಗಿತ್ತು.
ಇದರಿಂದ ಕಸ ಜಾಸ್ತಿಯಾಗಿದೆ. ಈ ಕಸವನ್ನು ಅಲ್ಲಲ್ಲೇ ಬಿಡಲಾಗಿದೆ. ಈ ಕಸವನ್ನು ಬಿಬಿಎಂಪಿ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿ. ಸಂಸ್ಥೆಯಿಂದ ವಿಲೇವಾರಿ ಮಾಡಲಾಗ್ತಿದೆ.
ನಗರದಲ್ಲಿ ಪ್ರತಿನಿತ್ಯ ಸರಿಸುಮಾರು 4900 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ದಸರಾ ಹಬ್ಬದ ಇದ್ದಿದ್ದರಿಂದ ಕಸ ಜಾಸ್ತಿಯಾಗಿದೆ. ಅಕ್ಟೋಬರ್ 12ಕ್ಕೆ 6306 ಮೆ.ಟನ್, ಅ.13ಕ್ಕೆ 5561 ಮೆ.ಟನ್ ಹಾಗೂ ಸೋಮವಾರ ಅಂದಾಜು 5866 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ.
ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳು ಹಾಗೂ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್ ಫಿಲ್ನಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಕಸದ ರಾಶಿಯೇ ಸೃಷ್ಟಿಯಾಗಿದೆ. ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಾರುಕಟ್ಟೆಗಳು ಕೆಸರು ಗದ್ದೆಯಂತೆ ಬದಲಾಗಿದೆ.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ, ಗಾಂಧಿಬಜಾರ್, ದೇವಸಂದ್ರ ಮಾರುಕಟ್ಟೆ, ಕೆ.ಆರ್ ಪುರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ರಸಲ್ ಮಾರುಕಟ್ಟೆ ಹಾಗೂ ಪಾಲಿಕೆ ಬಜಾರ್ ಸೇರಿದಂತೆ 12 ಮಾರುಕಟ್ಟೆಗಳಲ್ಲಿ ಕಸದ ರಾಶಿಯೇ ಸೃಷ್ಟಿಯಾಗಿದೆ.
ಕಳೆದ 2 ದಿನಗಳಲ್ಲಿ 414 ಮೆಟ್ರಿಕ್ ಟನ್ ತ್ಯಾಜ್ಯವನ್ನು ಮಾರುಕಟ್ಟೆಗಳಿಂದ ತೆಗೆಯಲಾಗಿದೆ. ಸೋಮವಾರವೂ 150ಕ್ಕೂ ಹೆಚ್ಚು ಜಾಗದಲ್ಲಿ ಕಸ ತೆಗೆಯಲಾಗಿದೆ.
ಹೆಚ್ಚುವರಿ ಯಂತ್ರಗಳ ಬಳಕೆ:
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಕಸ ಜಾಸ್ತಿಯಾಗಿದೆ.
ಹೀಗಾಗಿ, ಬೆಂಗಳೂರಿನ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಕಸ ತೆಗೆಯುವುದಕ್ಕೆ ಕಸ ವಿಭಾಗದ ಅಧಿಕಾರಿಗಳು ಹಾಗೂ ಮಾರ್ಷಲ್ಗಳ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಜೆಸಿಬಿಗಳನ್ನು ಬಳಸಿಕೊಳ್ಳಲಾಗ್ತಿದೆಯಂತೆ.
ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ಗಳಲ್ಲಿ 3/4 ಟ್ರಿಪ್ ಕಸ ತುಂಬಿಕೊಂಡು ಬೇರೆ ಕಡೆ ವಿಲೇವಾರಿ ಮಾಡಲಾಗ್ತಿದೆ.








