Mumbai (Maharashtra): ಬಾಲಿವುಡ್ ನಟ ಸಲ್ಮಾನ್ ಖಾನ್ (Bollywood actor Salman Khan) ಆಪ್ತ ರಾಜಕಾರಣಿ ಬಾಬಾ ಸಿದ್ದಿಕಿ (Baba Siddiqui) ಹತ್ಯೆ ಬಳಿಕ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಿಷ್ಣೋಯಿ ಗ್ಯಾಂಗ್ ನ ಮುಂದಿನ ಟಾರ್ಗೆಟ್ ಮುನಾವರ್ ಫಾರೂಕಿ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಹಾಗೆ ನೋಡಿದ್ರೆ ಕಳೆದ ತಿಂಗಳೇ ಮುನಾವರ್ ಫಾರೂಕಿಯನ್ನು (Munawar Faruqui) ದಿಲ್ಲಿಯಲ್ಲಿ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಯತ್ನಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ (stand-up comedian) ಮುನಾವರ್ ಫಾರೂಕಿಗೆ ಮುಂಬೈ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದಾರೆ.
ದಿಲ್ಲಿಯ ಹೋಟೆಲ್ ಒಂದರಲ್ಲಿ ಮುನಾವರ್ ಫಾರೂಕಿ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮ ನಡೆಯುವ ದಿನವೇ ಅದೇ ಹೋಟೆಲ್ನಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ರೂಂ ಬುಕ್ ಮಾಡಿಕೊಂಡಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಈ ತಂತ್ರಗಾರಿಕೆ ಕುರಿತಾಗಿ ದಿಲ್ಲಿಯ ಬೇಹುಗಾರಿಕಾ ಪಡೆಗೆ ಮಾಹಿತಿ ಲಭ್ಯವಾಯ್ತು ಎನ್ನಲಾಗಿದೆ.
ಕೂಡಲೇ ದಿಲ್ಲಿ ಪೊಲೀಸರು ಮುನಾವರ್ ಫಾರೂಕಿ ಕಾರ್ಯಕ್ರಮ ಆಯೋಜನೆಗೊಂಡಿದ್ದ ಹೋಟೆಲ್ಗೆ ತೆರಳಿ ಅವರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದರು. ಈ ಘಟನೆ ನಡೆದ ಬಳಿಕ ಮತ್ತೊಮ್ಮೆ ಮುನಾವರ್ ಫಾರೂಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಕೆಂಗಣ್ಣಿಗೆ ತುತ್ತಾಗಿರಲಿಲ್ಲ.
ಆದರೆ ಇದೀಗ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಕಿ ಅವರ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರ ಮಾಹಿತಿ ಅನ್ವಯ ಮುಂಬೈ ಪೊಲೀಸರು ಮುನಾವರ್ ಫಾರೂಕಿಗೆ ಭದ್ರತೆ ಬಿಗಿಗೊಳಿಸಿದ್ದಾರೆ ಎನ್ನಲಾಗಿದೆ.
ಲಾರೆನ್ಸ್ ಬಿಷ್ಣೋಯಿ (Lawrence Bishnoi)
ಲಾರೆನ್ಸ್ ಬಿಷ್ಣೋಯಿ ಮೂಲತಃ ಪಂಜಾಬಿನವ. ಆತ ಹುಟ್ಟಿದ್ದು 1993ರ ಫೆ. 12ರಂದು. ಪಂಜಾಬ್ ನ ಫಿರೋಜ್ ಪುರ್ ಜಿಲ್ಲೆಯಲ್ಲಿ ಆತ ಜನಿಸಿದ್ದ. ಆತನ ಒರಿಜಿನಲ್ ಹೆಸರು ಸತ್ವಿಂದರ್ ಸಿಂಗ್. ಆತ ಕೃಷಿಕ ಕುಟುಂಬದಿಂದ ಬಂದವನು.
ಈತ ಖ್ಯಾತ ಬಿಷ್ಣೋಯಿ ಸಮುದಾಯಕ್ಕೆ ಸೇರಿದಾತ. ಈ ಸಮುದಾಯ, ಪಂಜಾಬ್, ಹರ್ಯಾಣ, ರಾಜಸ್ಥಾನದಲ್ಲಿ ಹರಡಿದೆ.
ಫಿರೋಜ್ ಫುರ್ ನಲ್ಲೇ 12ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಆತ, ಆನಂತರ 2010ರಲ್ಲಿ ಚಂಡೀಗಡಕ್ಕೆ ಪದವಿ ವ್ಯಾಸಂಗ ಮಾಡಲು ಶಿಫ್ಟ್ ಆದ. ಡಿಎವಿ ಕಾಲೇಜಿಗೆ ಸೇರಿದ್ದ. ಅಲ್ಲಿಯೇ ಆತನ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು.
2011-12ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಎಸ್ಒಪಿಯು) ಅಧ್ಯಕ್ಷನೂ ಆದ. ಅಲ್ಲಿ ಆತ ಸ್ಟೂಡೆಂಟ್ ಪಾಲಿಟಿಕ್ಸ್ ನಲ್ಲಿ ಪೂರ್ಣವಾಗಿ ಒಳಗಾದ.
ಆಗ ಚಂಡೀಗಡದ ಅಂಡರ್ ವರ್ಲ್ಡ್ ನಲ್ಲಿ ಕುಖ್ಯಾತನಾಗಿದ್ದ ಗೋಲ್ಡಿಬ್ರಾರ್ ನ ಆತ್ಮೀಯನಾಗಿಬಿಟ್ಟ. ಅಲ್ಲಿಂದಲೇ ಆತನ ಕ್ರಿಮಿನಲ್ ಇತಿಹಾಸ ಶುರುವಾಗಿದ್ದು ಎಂದು ಹೇಳಲಾಗುತ್ತದೆ.