New Delhi: ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅನುಸರಿಸಲು ರೈತರಿಗೆ (farmers) ಪ್ರೇರಣೆ ನೀಡಬಲ್ಲಂತಹ ಕಾರ್ಬನ್ ಕ್ರೆಡಿಟ್ (Carbon Credit) ಪ್ರಯೋಗ ಭಾರತದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿದೆ.
ಭಾರತದ ಪ್ರಮುಖ ಬೀಜ ಕಂಪನಿ ಮಹಿಕೋ ಮತ್ತು ಅಮೆರಿಕದ ಇಂಡಿಗೋ (Mahico and America’s Indigo) ಜಂಟಿಯಾಗಿ ಸ್ಥಾಪಿಸಿರುವ ಗ್ರೋ ಇಂಡಿಗೋ ಸಂಸ್ಥೆ (Grow Indigo) ಇಂಥದ್ದೊಂದು ಪ್ರಯೋಗ ನಡೆಸುತ್ತಿದೆ.
ಮೊದಲಿಗೆ ದೇಶದ ಎಂಟು ರಾಜ್ಯಗಳ 80,000 ಸಣ್ಣ ರೈತರನ್ನು ಈ ಸ್ಕೀಮ್ಗೆ ಆಯ್ದುಕೊಳ್ಳಲಾಗಿದೆ. ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಕಾರ್ಬನ್ ಕ್ರೆಡಿಟ್ ರೂಪದಲ್ಲಿ ಹಣ ಸಿಗಲಿದೆ.
ಮಿತವಾಗಿ ನೀರು ಬಳಕೆ, ಕಡಿಮೆ ಹೊಲ ಉಳುವಿಕೆ, DSR ತಂತ್ರ ಬಳಕೆ, ಮಣ್ಣಿನ ಸಾರ ಉಳಿಸುವಿಕೆ, ನೈಟ್ರೋಜನ್ ಗೊಬ್ಬರ ನಿರ್ವಹಣೆ, ಕೃಷಿ ಅರಣ್ಯ ಇತ್ಯಾದಿ ವಿಧಾನಗಳನ್ನು ಅನುಸರಿಸುವ ರೈತರಿಗೆ ಅಗತ್ಯ ಕಾರ್ಬನ್ ಕ್ರೆಡಿಟ್ ಸಿಗುತ್ತದೆ.
ಈ ಕಾರ್ಬನ್ ಕ್ರೆಡಿಟ್ ಅನ್ನು ಯಾವುದಾದರೂ ಕೈಗಾರಿಕೆಗಳು ಹಣಕ್ಕೆ ಖರೀದಿಸಬಹುದು. ಈ ಮೂಲಕ ರೈತರಿಗೆ ಪರಿಸರಸ್ನೇಹಿ ಕೃಷಿ ವಿಧಾನ ಅನುಸರಿಸಿದ್ದಕ್ಕೆ ಕಾರ್ಬನ್ ಕ್ರೆಡಿಟ್ ಮೂಲಕ ಆದಾಯವೂ ಪ್ರಾಪ್ತವಾಗುತ್ತದೆ.
ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ 80,000 ರೈತರನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿದೆ.
Carbon Credit
ಜಗತ್ತಿನಾದ್ಯಂತ ಪರಿಸರಕ್ಕೆ ಹಾನಿಯಾಗುವುದನ್ನು ಸಾಧ್ಯವಾದಷ್ಟೂ ತಗ್ಗಿಸಲು ವಿಶ್ವಸಂಸ್ಥೆ ಗುರಿ ಇಟ್ಟಿದೆ. ಕಾರ್ಬನ್ ನ್ಯೂಟ್ರಲ್ ಅಥವಾ ಶೂನ್ಯ ಮಾಲಿನ್ಯ ಹೊರಸೂಸುವಿಕೆ ಇತ್ಯಾದಿ ಉಪಗುರಿಗಳನ್ನು ಇಡಲಾಗಿದೆ.
ವಿವಿಧ ಕೈಗಾರಿಕೆಗಳು ಪರಿಸರಕ್ಕೆ ಹಾನಿಯಾಗದಂತೆ ನಿರ್ವಹಣೆ ಆಗಬೇಕು ಎನ್ನುವ ಆಶಯ ಇದೆ. ಆದರೆ, ಮೈನಿಂಗ್, ವಿಮಾನಯಾನ ಮೊದಲಾದ ಕ್ಷೇತ್ರದ ಕಂಪನಿಗಳಿಂದ ಮಾಲಿನ್ಯ ಉತ್ಪತ್ತಿ ನಿಯಂತ್ರಣ ಬಹಳ ಕಷ್ಟ. ಈ ಸಂದರ್ಭದಲ್ಲಿ ಇಂಥ ಕೈಗಾರಿಕೆಗಳು ಕಾರ್ಬನ್ ಕ್ರೆಡಿಟ್ ಖರೀದಿಸಬೇಕು ಎನ್ನುವ ನಿಯಮ ಇದೆ.
ಒಂದು ಕಡೆ ಪರಿಸರ ಹಾನಿಯಾದರೆ, ಇನ್ನೊಂದೆಡೆ ಅಷ್ಟೇ ಪ್ರಮಾಣದಲ್ಲಿ ಪರಿಸರ ಬೆಳವಣಿಗೆ ಆಗಬೇಕು. ಇದರಿಂದ ಪರಿಸರ ಹಾಳಾಗುವಿಕೆ ಪ್ರಮಾಣ ಶೂನ್ಯ ಇರುತ್ತದೆ.
ಹೆಚ್ಚು ಗಿಡಮರ ಬೆಳೆಸುವುದು, ಮಾಲಿನ್ಯ ತಗ್ಗಿಸುವುದು ಇವೇ ಮುಂತಾದ ಕಾರ್ಯಗಳನ್ನು ಕೈಗೊಳ್ಳುವ ವ್ಯಕ್ತಿಗಳು, ಸಂಸ್ಥೆಗಳು ಸರ್ಕಾರದಿಂದ ಕಾರ್ಬನ್ ಕ್ರೆಡಿಟ್ ಪಡೆಯಬಹುದು.
ಇದನ್ನು ಅವಶ್ಯಕತೆ ಇದ್ದವರು ಖರೀದಿಸಬಹುದು. ಪರಿಸರ ಉಳಿತಾಯ ಎಷ್ಟು ಆಗಿರುತ್ತದೋ ಅದಕ್ಕೆ ಅನುಗುಣವಾಗಿ ಕಾರ್ಬನ್ ಕ್ರೆಡಿಟ್ ಸಿಗುತ್ತದೆ.