New Delhi: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ನಿರ್ದೇಶಕರ ಮಂಡಳಿಗೆ ಮಾಜಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ (Amitabh Kant) ಅವರನ್ನು ನೇಮಕ ಮಾಡಿದೆ. ಭಾರತದಲ್ಲಿ ಜಿ20 ಶೆರ್ಪಾ ಆಗಿ ಕಾರ್ಯನಿರ್ವಹಿಸಿದ್ದ ಅಮಿತಾಭ್ ಕಾಂತ್ ಅವರನ್ನು ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕ ಮಾಡುವ ಬಗ್ಗೆ ಕಂಪನಿಯು ಘೋಷಿಸಿದೆ.
ಈ ನೇಮಕಾತಿ ಕಂಪನಿಯ ಷೇರುದಾರರ ಅನುಮೋದನೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ‘ಸೆಕ್ಯೂರಿಟಿ ಕ್ಲಿಯರೆನ್ಸ್’ ಸಿಕ್ಕ ನಂತರ ಅಧಿಕೃತವಾಗಲಿದೆ ಎಂದು ಇಂಟರ್ ಗ್ಲೋಬ್ ಏವಿಯೇಶನ್ ಸಂಸ್ಥೆಯ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ನಿರ್ಧಾರವು 2025ರ ಜುಲೈ 3ರಂದು ನಡೆದ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಇಂಡಿಗೋ ನಿರ್ದೇಶಕರ ಮಂಡಳಿಯ ಪ್ರಮುಖರು
- ವಿಕ್ರಮ್ ಸಿಂಗ್ ಮೆಹ್ತಾ: ಚೈರ್ಮನ್
- ರಾಕೇಶ್ ಗಂಗವಾಲ್: ಸಂಸ್ಥಾಪಕ
- ರಾಹುಲ್ ಭಾಟಿಯಾ: ಸಹ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್
- ಪೀಟರ್ ಎಲ್ಬರ್ಸ್: ಸಿಇಒ
ಅಮಿತಾಭ್ ಕಾಂತ್ ಅವರಿಗೆ ನೀತಿ ರೂಪಿಸುವಲ್ಲಿ ದೀರ್ಘ ಅನುಭವವಿದ್ದು, ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಬಹುದಾದ ಕೊಡುಗೆ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಭಾರತದಲ್ಲಿ ಈ ಕ್ಷೇತ್ರ ಬೆಳೆಯುತ್ತಿದ್ದರೂ, ಲಾಭದಾಯಕವಾಗಿ ಪರಿಣಮಿಸಿಲ್ಲ ಎಂಬ ಅಂಶದ ಬೆಳಕಿನಲ್ಲಿ ಅವರ ನೇಮಕ ವಿಶೇಷವಾಗಿದೆ.
1956ರಲ್ಲಿ ವಾರಾಣಸಿಯಲ್ಲಿ ಜನಿಸಿದ ಅವರು, 1980ರಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದರು. 2016ರಿಂದ 2022ರವರೆಗೆ ಅವರು ನೀತಿ ಆಯೋಗ್‌ನ ಎರಡನೇ ಸಿಇಒ ಆಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು 2022ರಿಂದ 2025ರ ಜೂನ್ 16ರವರೆಗೆ ಭಾರತ ಜಿ20 ಶೆರ್ಪಾ ಆಗಿ ಸೇವೆ ಸಲ್ಲಿಸಿದರು.
ಇತ್ತೀಚೆಗಿನ ನಿವೃತ್ತಿಯ ನಂತರ, ಅವರು ದೇಶದ ಪ್ರಗತಿಗೆ ತಮ್ಮ ಕೊಡುಗೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಲ್ಲದೇ, ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ ಎಂಬ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದರು.