Channapatna: ಚನ್ನಪಟ್ಟಣ (Channapatna) ಟಿಕೆಟ್ ಕೈತಪ್ಪುವುದು ಖಚಿತವಾದ ಬೆನ್ನಲ್ಲೇ ಬಿಜೆಪಿಗೆ (BJP) ರಾಜೀನಾಮೆ ನೀಡಿದ ಸಿ.ಪಿ. ಯೋಗೇಶ್ವರ್ (CP Yogeshwar) ಅವರು ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಗೊಂಡರು. ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಪಕ್ಷದ ಅಭ್ಯರ್ಥಿ ಕೂಡ ಆಗಿದ್ದಾರೆ.
ಇದರಿಂದ ಕ್ಷೇತ್ರದಲ್ಲಿನ ಮೂಲ ಕಾಂಗ್ರೆಸ್ಸಿಗರ ನಡುವೆ ಅಸಮಧಾನ ಉಂಟಾಗಿದೆ. ಹಾಗಾಗಿ ಇಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಕ್ಷೇತ್ರದಲ್ಲಿನ ಮೂಲ ಕಾಂಗ್ರೆಸ್‌ಗರು ಹಾಗೂ ಯೋಗೇಶ್ವರ್ ಬೆಂಬಲಿಗರ ಜೊತೆ ಸಮನ್ವಯ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ಯೋಗೇಶ್ವರ್ ಬೆಂಬಲಿಗರು ಭಾಗಲಿದ್ದಾರೆ. ಹೊಂಗನೂರು – ಮಳೂರು – ಬೇವೂರು ಜಿ.ಪಂ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಭಾಗಿಯಾಗಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಇಬ್ಬರೂ ನಾಯಕರು, ಎರಡೂ ಕಡೆಯ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಿ ಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಿದ ವಿಚಾರವಾಗಿ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವಿರುವ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನವಿಲ್ಲ. ಕೆಲವರು ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಈಗ ಅಸಮಾಧಾನವಿಲ್ಲ. ಸುರೇಶ್ ಅವರೇ ಜವಾಬ್ದಾರಿ ವಹಿಸಿದ್ದು, ಅವರೇ ಅಭ್ಯರ್ಥಿಯನ್ನು ಮೊದಲು ಭೇಟಿ ಮಾಡಿದ್ದಾರೆ. ಪಕ್ಷದ ಹಿತದಿಂದ ನಾವು ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಚನ್ನಪಟ್ಟಣಕ್ಕೆ ಹೊಸರೂಪವನ್ನು ನೀಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಕರ್ನಾಟಕದ ಅಭಿವೃದ್ದಿಯೇ ನಮ್ಮ ಸಂಕಲ್ಪ. ಈ ಗುರಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಚನ್ನಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸುಮಾರು 500 ಕೋಟಿ ಅನುದಾನ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.