Delhi: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಅದರ ಭಾಗವಾಗಿ 205 ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು ಸ್ವದೇಶಕ್ಕೆ ಕಳುಹಿಸಿದೆ.
ಅಮೆರಿಕದಲ್ಲಿ ಸೂಕ್ತ ದಾಖಲೆಗಳಿಲ್ಲದೆ ನೆಲೆಸಿದ್ದ ಈ ವಲಸಿಗರನ್ನು ಸ್ಯಾನ್ ಆ್ಯಂಟಾನಿಯೋ ವಿಮಾನ ನಿಲ್ದಾಣದಿಂದ ಸಿ-17 ಮಿಲಿಟರಿ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ. ಇವರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಾತ್ರ ಗಡೀಪಾರು ಮಾಡಲಾಗಿದೆ. ಈ ವಿಮಾನ ಮಾರ್ಗಮಧ್ಯೆ ಜರ್ಮನಿಯ ರಾಮ್‌ಸ್ಟೈನ್‌ನಲ್ಲಿ ತಕ್ಷಣದ ಇಂಧನ ತುಂಬಿಕೊಂಡು, ನಂತರ ನೇರವಾಗಿ ಪಂಜಾಬ್‌ನಲ್ಲಿ ಭೂಸ್ಪರ್ಶ ಮಾಡಲಿದೆ.
ಅಮೆರಿಕದ ರಾಯಭಾರ ಕಚೇರಿ ಈ ಬೆಳವಣಿಗೆಯನ್ನು ಖಚಿತಪಡಿಸಲು ನಿರಾಕರಿಸಿದೆ. ಆದರೆ ಅಮೆರಿಕ ತನ್ನ ವಲಸೆ ನೀತಿಯನ್ನು ಕಠಿಣಗೊಳಿಸುತ್ತಿದೆ ಎಂದು ಮಾತ್ರ ಹೇಳಿದೆ. ಈ ಹಿಂದೆಯೂ ಅಮೆರಿಕ ಅಕ್ರಮ ವಲಸಿಗರನ್ನು ತವರಿನತ್ತ ಕಳುಹಿಸುತ್ತಿದ್ದರೂ, ಟ್ರಂಪ್ ಅವರ ಎರಡನೇ ಅವಧಿಯಲ್ಲಿಯೇ ಪ್ರಥಮ ಬಾರಿಗೆ ಭಾರತೀಯರನ್ನು ಗಡೀಪಾರು ಮಾಡಲಾಗಿದೆ.
ಟ್ರಂಪ್ ಸರ್ಕಾರ ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಗಡೀಪಾರು ಪ್ರಕ್ರಿಯೆ ಆರಂಭಿಸಿದೆ. ಒಟ್ಟು 1.5 ದಶಲಕ್ಷ ಅಕ್ರಮ ವಲಸಿಗರನ್ನು ಹಿಂತಿರುಗಿಸಲು ಯೋಜನೆ ಮಾಡಿದ್ದು, ಇದರಲ್ಲಿ 18,000 ಭಾರತೀಯರು ಇದ್ದಾರೆ. ಅಮೆರಿಕದಲ್ಲಿ 7.25 ಲಕ್ಷ ಮಂದಿ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ, ಇದು ಮೆಕ್ಸಿಕೋ ಮತ್ತು ಎಲ್ ಸಾಲ್ವೆಡಾರ್ ನಂತರದ ಮೂರನೇ ಅತಿದೊಡ್ಡ ಅಕ್ರಮ ವಲಸಿಗರ ಸಮೂಹವಾಗಿದೆ.
ಈ ಕ್ರಮಕ್ಕೆ ಭಾರತ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕಾರ, ಭಾರತ ತನ್ನ ಅಕ್ರಮ ವಲಸಿಗರನ್ನು ಸ್ವೀಕರಿಸಲು ಸಿದ್ಧವಾಗಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿ, ಅಕ್ರಮ ವಲಸೆ ಹಲವು ಅಪರಾಧಗಳಿಗೆ ಕಾರಣವಾಗುವುದರಿಂದ, ಭಾರತ ಅಂಥ ಪ್ರಯತ್ನಗಳನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ. ಸೂಕ್ತ ದಾಖಲೆಗಳಿದ್ದರೆ, ಅಂತಹವರನ್ನು ವಾಪಸ್ ಸ್ವೀಕರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.