Bengaluru: ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ (Amateur Kabaddi Federation of India-AKFI) ಮೂವರು ಹಿರಿಯ ಕಬಡ್ಡಿ ಪಟುಗಳನ್ನು ಭಾರತ ಪುರುಷರ ತಂಡದ ಆಯ್ಕೆಗಾರರಾಗಿ ನೇಮಿಸಿದೆ. ಈ ಪ್ಯಾನಲ್‌ನಲ್ಲಿ ಕನ್ನಡಿಗ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ. ರಮೇಶ್ (BC Ramesh) ಸ್ಥಾನ ಪಡೆದಿದ್ದಾರೆ. ಬಲ್ವಾನ್ ಸಿಂಗ್ ಮತ್ತು ಜೈವೀರ್ ಶರ್ಮಾ ಕೂಡ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.
ಈ ಸಮಿತಿ ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. “2005ರಿಂದ 2016-17ರ ವರೆಗೆ ನಾನು ಭಾರತ ತಂಡದ ಆಯ್ಕೆಗಾರನಾಗಿ ಕೆಲಸ ಮಾಡಿದ್ದೇನೆ. ಈಗ ಫೆಡರೇಶನ್ ಮತ್ತೆ ಅವಕಾಶ ನೀಡಿದೆ. ನನಗೆ ತುಂಬಾ ಸಂತೋಷವಾಗಿದೆ. ಫೆ.20ರಿಂದ ಪ್ರಾರಂಭವಾಗುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುತ್ತೇವೆ” ಎಂದು ಹೇಳಿದರು.
71ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್ ಫೆ. 23ರ ವರೆಗೆ ನಡೆಯಲಿದ್ದು, ಕರ್ನಾಟಕ ಸೇರಿ ಒಟ್ಟು 30 ತಂಡಗಳು ಸ್ಪರ್ಧಿಸಲಿದೆ. ಈ ಟೂರ್ನಿ ಕಟಕ್‌ನ ಜೆ.ಎನ್. ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.