Washington: ನಾವು ಕೊಟ್ಟ ಮಾತನ್ನು ಈಡೇರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ. ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಬಾಹ್ಯಾಕಾಶದಿಂದ ಮರಳಿದ್ದಾರೆ. ಇಬ್ಬರೂ ಸ್ಪೇಸ್ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಭೂಮಿಗೆ ಬಂದಿದ್ದಾರೆ.
“ನಾನು ಅಧಿಕಾರಕ್ಕೆ ಬಂದಾಗ, ಸುನೀತಾ ಮತ್ತು ತಂಡವನ್ನು ಮರಳಿ ಕರೆತರಬೇಕೆಂದು ಎಲಾನ್ ಮಸ್ಕ್‌ಗೆ ಹೇಳಿದ್ದೆ. ಅದು ಬೈಡನ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ಅವರು ಹಿಂದಿರುಗಿದ್ದಾರೆ. ಗುಣಮುಖರಾದ ನಂತರ ಅವರು ಓವಲ್ ಕಚೇರಿಗೆ ಬರುತ್ತಾರೆ,” ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮಾತಿನ ಬೆನ್ನಲ್ಲೇ ಶ್ವೇತಭವನ ಕೂಡಾ ಸ್ಪಷ್ಟನೆ ನೀಡಿದ್ದು, “ನಾವು ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದೇವೆ” ಎಂದು ಪ್ರಕಟಣೆಯಲ್ಲಿ ಹೇಳಿದೆ. ಟ್ರಂಪ್ ಅವರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಮರಳಿಸುವ ಭರವಸೆ ನೀಡಿದ್ದರು. ಈಗ ಅವರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿದ್ದಾರೆ.
ನಾಸಾದ ಗಗನಯಾತ್ರಿಯಾದ ಸುನೀತಾ ವಿಲಿಯಮ್ಸ್, ಡ್ರ್ಯಾಗನ್ ಕ್ಯಾಪ್ಸುಲ್ ನಿಂದ ಹೊರಬಂದಾಗ ಅವರ ಮುಖದಲ್ಲಿ ನಗು ಮಿಂಚಿತ್ತು. ಸಮುದ್ರ ತೀರದಲ್ಲಿ ಇಳಿದ ನಂತರ, ಈ ಪ್ರಯಾಣ ರೋಮಾಂಚನಕಾರಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಡ್ರ್ಯಾಗನ್ ಕ್ಯಾಪ್ಸುಲ್ ಹಡಗಿನ ಮೇಲೆ ಇಡಲಾಗಿದ್ದು, 17 ಗಂಟೆಗಳ ನಂತರ ಗಗನಯಾತ್ರಿಗಳು ಹೊರಬಂದಾಗ ಅವರು ಆರೋಗ್ಯವಾಗಿದ್ದರು.
2024ರ ಜೂನ್ 8ರಂದು, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮಿಷನ್‌ಗೆ ತೆರಳಿದರು. ಇದು ಕೇವಲ 10 ದಿನಗಳ ಮಿಷನ್ ಆಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಮರಳಲು ಸಾಧ್ಯವಾಗಲಿಲ್ಲ. ಇದೀಗ 9 ತಿಂಗಳ ನಂತರ, ಅವರು ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.