ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾ ಆಟಗಾರರಿಗೆ ವಿಧಿಸಿದ್ದ ಕಟ್ಟು ನಿಟ್ಟಿನ ನಿಯಮವನ್ನು ಮರುಪರಿಶೀಲಿಸಲು ನಿರ್ಧರಿಸಿದೆ. ಈ ಹಿಂದಿನ ನಿಯಮದ ಪ್ರಕಾರ, ವಿದೇಶಿ ಪ್ರವಾಸದ ವೇಳೆ ಆಟಗಾರರ ಕುಟುಂಬಸ್ಥರು ನಿರ್ದಿಷ್ಟ ಸಮಯದವರೆಗೆ ಮಾತ್ರ ಜೊತೆಗಿರಬಹುದಾಗಿತ್ತು. ಆದರೆ, ಈಗ ಬಿಸಿಸಿಐ ಈ ನಿಯಮದಲ್ಲಿ ಬದಲಾವಣೆ ತರುವ ಚಿಂತನೆಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬಳಿಕ ಬಿಸಿಸಿಐ ಆಟಗಾರರಿಗೆ ಹೊಸ ಪ್ರಯಾಣ ನೀತಿ ಜಾರಿಗೆ ತಂದಿತ್ತು. ಇದರಂತೆ, ವಿದೇಶಿ ಪ್ರವಾಸದ ವೇಳೆ ಕುಟುಂಬ ಸದಸ್ಯರ ಕಾಲಾವಧಿ ಕೇವಲ ಎರಡು ವಾರಗಳಾಗಿತ್ತು. ಆದರೆ, ವಿರಾಟ್ ಕೊಹ್ಲಿ ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡ ಪಂದ್ಯಗಳು ಅಥವಾ ಕಠಿಣ ಸನ್ನಿವೇಶಗಳಲ್ಲಿ ಕುಟುಂಬ ಸದಸ್ಯರ ಹಾಜರಾತಿ ಆಟಗಾರರಿಗೆ ಮಾನಸಿಕ ಶಾಂತಿ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕೊಹ್ಲಿಯ ಅಭಿಪ್ರಾಯದ ನಂತರ, ಬಿಸಿಸಿಐ ಹೊಸ ನಿಯಮ ಅನುಸರಿಸಲು ಮುಂದಾಗಿದೆ.
ಹೊಸದಾಗಿ ಬದಲಾವಣೆಯಾದ ನಿಯಮದ ಪ್ರಕಾರ, ವಿದೇಶ ಪ್ರವಾಸದ ವೇಳೆ ಆಟಗಾರರು ತಮ್ಮ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸಿದರೆ, ಅವರು ಅನುಮತಿ ಪಡೆಯಬಹುದು. ಈ ನಿಯಮ ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಅನ್ವಯಿಸಬಹುದು.
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ ವಿವರ
ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20, 2025ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ವೇಳಾಪಟ್ಟಿ,
- ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
- 2ನೇ ಟೆಸ್ಟ್: 2-6 ಜುಲೈ, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
- 3ನೇ ಟೆಸ್ಟ್: 10-14 ಜುಲೈ, 2025 – ಲಾರ್ಡ್ಸ್, ಲಂಡನ್
- 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್