Delhi: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸುವುದಕ್ಕೂ ಅವರ ಅಧಿಕೃತ ನಿವಾಸದಲ್ಲಿ ಪತ್ತೆಯಾಗಿರುವ ನಗದುಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಯ ವರ್ಗಾವಣೆ ನಿರ್ಧಾರವು ನಿರ್ದಿಷ್ಟ ಪ್ರಕ್ರಿಯೆಯ ಪ್ರಕಾರ ಸ್ವತಂತ್ರವಾಗಿ ತೆಗೆದುಕೊಳ್ಳಲಾಗಿದ್ದು, ನಗದು ಪತ್ತೆಗೆ ಸಂಬಂಧಪಟ್ಟಂತೆ ಆಂತರಿಕ ತನಿಖೆ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಪ್ರಕಟಣೆ ತಿಳಿಸಿದೆ.
“ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಡೆದ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲಾಗಿದ್ದು, ವರದಿ ಭಾರತೀಯ ಮುಖ್ಯ ನ್ಯಾಯಮೂರ್ತಿಗೆ (CJI) ಸಲ್ಲಿಕೆಯಾಗಲಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಬೆಂಕಿ ಸಂಭವಿಸಿದ ನಂತರ ಅಗ್ನಿಶಾಮಕ ದಳದವರು ಅಲ್ಲಿ ದೊಡ್ಡ ಪ್ರಮಾಣದ ನಗದು ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಆದರೆ ಈ ಬೆಳವಣಿಗೆ ಅವರ ವರ್ಗಾವಣೆಗೆ ಸಂಬಂಧಿಸಿದ್ದಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದಲ್ಲಿ ಕೊಲಿಜಿಯಂ ಸಭೆ ನಡೆಯಿತು. ಸಭೆಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಲು ನಿರ್ಧಾರ ಕೈಗೊಳ್ಳಲಾಯಿತು.