ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ಅವರು “ಅಮೆರಿಕದೊಂದಿಗಿನ ಹಳೆಯ ಸಂಬಂಧ ಕೊನೆಗೊಂಡಿದೆ” ಎಂದು ಘೋಷಿಸಿದ್ದಾರೆ. ಕೆನಡಾ ತನ್ನ ನೆರೆಯ ದೇಶ ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದು, ಇದು ಅಮೆರಿಕ-ಕೆನಡಾ ಸಂಬಂಧದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಹೊಸ ಸುಂಕಗಳನ್ನು ವಿಧಿಸಿದ ನಂತರ, ಅಮೆರಿಕದೊಂದಿಗಿನ ಹಳೆಯ ಆರ್ಥಿಕ ಸಹಕಾರ ಮುಕ್ತಾಯವಾಗಿದೆ ಎಂದು ಕಾರ್ನಿ ಹೇಳಿದ್ದಾರೆ. ಕೆನಡಾ ಮತ್ತು ಅಮೆರಿಕದ ನಡುವಿನ ಆರ್ಥಿಕ ಏಕೀಕರಣ ಮತ್ತು ಭದ್ರತಾ ಸಹಕಾರದ ತಳಹದಿಯು ಈಗ ಬದಲಾವಣೆಯ ಹಂತದಲ್ಲಿದೆ.
ಟ್ರಂಪ್ ಅವರ ನೀತಿಗಳು ಕೆನಡಾದ ಆರ್ಥಿಕತೆಯನ್ನು ನೇರವಾಗಿ ಪ್ರಭಾವಿತರಿಸಿವೆ. ವಿಶೇಷವಾಗಿ, ಟ್ರಂಪ್ ಅವರು ಕೆನಡಾ ಮತ್ತು ಮೆಕ್ಸಿಕೋದ ವಾಹನ ಆಮದಿನ ಮೇಲೆ ಶೇ.25% ಸುಂಕವನ್ನು ವಿಧಿಸಿರುವುದು ಕಳವಳ ಮೂಡಿಸಿದೆ. ಇದು ಕೆನಡಾದ ಅತಿದೊಡ್ಡ ರಫ್ತು ವಲಯಗಳಲ್ಲಿ ಒಂದಾದ ಆಟೋಮೊಬೈಲ್ ಉದ್ಯಮವನ್ನು ಹಾನಿ ಮಾಡಬಹುದು. ಈ ವಲಯದಲ್ಲಿ ನೇರವಾಗಿ 1,25,000 ಜನರು ಉದ್ಯೋಗ ಹೊಂದಿದ್ದು, ಸುಮಾರು 5,00,000 ಜನರ ಜೀವನಕ್ಕೆ ಇದು ಪರಿಣಾಮ ಬೀರುತ್ತದೆ.
ಟ್ರಂಪ್ ಅವರು ಅಮೆರಿಕದಲ್ಲಿ ನಿರ್ಮಿತ ವಾಹನಗಳಿಗೆ ಸುಂಕವಿಲ್ಲ ಎಂಬ ಘೋಷಣೆಯನ್ನು ಒತ್ತಿ ಹೇಳಿದ್ದಾರೆ. ಏಪ್ರಿಲ್ 2ರಿಂದ ಈ ಹೊಸ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್ 3ರಿಂದ ಸುಂಕ ಸಂಗ್ರಹ ಪ್ರಾರಂಭವಾಗಲಿದೆ. ಈ ನಿರ್ಧಾರ ಅಮೆರಿಕದ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ಅವರು ವಾದಿಸಿದ್ದಾರೆ.
ಪ್ರಧಾನಿ ಕಾರ್ನಿ, ಅಮೆರಿಕದೊಂದಿಗೆ ಮುಂದಿನ ದಿವಸಗಳಲ್ಲಿ ಚರ್ಚೆ ನಡೆಸಲು ಯೋಜನೆ ಮಾಡಿದ್ದಾರೆ. ಆದರೆ, ಕೆನಡಾ ತನ್ನ ಸ್ವಾವಲಂಬನೆ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಹೊಸ ವ್ಯಾಪಾರ ನೀತಿಗಳು ವಿಶ್ವ ಮಟ್ಟದ ವ್ಯಾಪಾರ ಯುದ್ಧವನ್ನು ಉತ್ತೇಜಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.