ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಯನ್ನು ಲೋಕಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಮಂಡಿಸಿದರು. ಈ ಮಸೂದೆಯು ವಿರೋಧ ಪಕ್ಷಗಳ ತೀವ್ರ ಆಕ್ಷೇಪವನ್ನ ಎದುರಿಸುತ್ತಿದೆ. ಆದರೆ, ಅದಕ್ಕೂ ಮೀರಿಸಿ, ಮುಸ್ಲಿಂ ಸಮುದಾಯದ ಮಹಿಳೆಯರಿಂದ ಬೆಂಬಲ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಗುಲಾಬಿಗಳನ್ನು ಹಿಡಿದು, “ಮೋದಿ ಜಿಗೆ ಧನ್ಯವಾದ” ಎಂಬ ಫಲಕಗಳೊಂದಿಗೆ ಬೀದಿಗೆ ಬಂದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ನೂರಾರು ಜನರು ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಜಾಥಾ ನಡೆಸಿದರು.
ನಗರದ ವಿವಿಧ ಮುಸ್ಲಿಂ ಸಮುದಾಯಗಳು ಮಸೂದೆಯನ್ನು ಬೆಂಬಲಿಸಿ ರ್ಯಾಲಿಗಳನ್ನು ಆಯೋಜಿಸಿದ್ದವು. ಪುರುಷರೂ ಜಾಥಾ ನಡೆಸಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು. ಜನರು “ಧನ್ಯವಾದಗಳು, ಮೋದಿ ಜಿ” ಎಂಬ ಪ್ಲೆಕಾರ್ಡ್ ಹಿಡಿದು, ಪ್ರಧಾನಿ ನರೇಂದ್ರ ಮೋದಿಯ ಪರ ಘೋಷಣೆ ಕೂಗಿದರು.
1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದು ಕಿರಣ್ ರಿಜಿಜು ಹೇಳಿದರು. 1995ರಲ್ಲಿ ಜಾರಿಯಾದಾಗ ಯಾರು ವಿರೋಧಿಸಿರಲಿಲ್ಲ. ಈ ಹಿಂದೆ ಕೂಡ ತಿದ್ದುಪಡಿ ಮಾಡಲಾಗಿತ್ತು. ಆದರೂ ಈಗ ಸರ್ಕಾರ ತಿದ್ದುಪಡಿ ಮಾಡಿದರೆ ಅದು ಸಂವಿಧಾನ ವಿರೋಧಿ ಎನ್ನಲಾಗುತ್ತಿದೆ ಎಂದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದ ಬಳಿಕ, ಸ್ಪೀಕರ್ ಓಂ ಬಿರ್ಲಾ ಎಂಟು ಗಂಟೆಗಳ ಚರ್ಚೆಗೆ ಅವಕಾಶ ನೀಡಿದರು. ಆದರೆ, ವಿರೋಧ ಪಕ್ಷಗಳು ತೀವ್ರ ಗದ್ದಲ ಮಾಡಿದ್ದರಿಂದ ಸಂಸತ್ತಿನಲ್ಲಿ ಬಿಲ್ನ ಚರ್ಚೆ ಗರಿಗೆದರಿತು.
ಲೋಕಸಭೆಯಲ್ಲಿ ಯಾವುದೇ ಮಸೂದೆ ಅಂಗೀಕಾರಕ್ಕಾಗಿ 272 ಸಂಸದರ ಬೆಂಬಲ ಅಗತ್ಯವಿದ್ದು, NDA 293 ಸಂಸದರ ಬಲವಿದೆ. ಇದರಲ್ಲಿ ಬಿಜೆಪಿಯ 240 ಸಂಸದರು ಸೇರಿದ್ದಾರೆ. ಜೆಡಿಯು, ಟಿಡಿಪಿ ಮುಂತಾದ NDA ಮಿತ್ರಪಕ್ಷಗಳು ಕೂಡ ಮಸೂದೆಗೆ ಬೆಂಬಲ ಘೋಷಿಸಿವೆ.
ಇದರಿಂದ, ವಕ್ಫ್ ತಿದ್ದುಪಡಿ ಮಸೂದೆಗೆ ಪ್ರಬಲ ಬೆಂಬಲ ವ್ಯಕ್ತವಾಗುತ್ತಿದ್ದು, ಮುಸ್ಲಿಂ ಮಹಿಳೆಯರ ಅಚ್ಚರಿಯ ಸಹಭಾಗಿತ್ವ ವಿಶೇಷ ಗಮನಸೆಳೆಯುತ್ತಿದೆ.








