Bengaluru: ಯಾವುದೇ ಸಮುದಾಯವು ಹಿಂದಿನಿಂದ ಅನುಸರಿಸುತ್ತಿರುವ ಸಾಂಪ್ರದಾಯಿಕ ವೃತ್ತಿಯನ್ನು ತಾವು ನಿರಾಕರಿಸಿದ ಬಳಿಕ, ಮತ್ತೆ ಅದೇ ವೃತ್ತಿಗೆ ಒತ್ತಾಯ ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್ (High Court) ತಿಳಿಸಿದೆ.
ಹಲಗೆ (ತಮಟೆ) ಬಾರಿಸುವ ಕೆಲಸ ತಿರಸ್ಕರಿಸಿದ ನಂತರ ಅದನ್ನು ಮತ್ತೆ ಮಾಡಬೇಕೆಂದು ಒತ್ತಾಯ ಮಾಡಿರುವುದನ್ನು ಪ್ರಶ್ನಿಸಿ, ಯಾದಗಿರಿ ಜಿಲ್ಲೆಯ ಮಾದಿಗ ದಂಡೋರ ಸಮುದಾಯ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠ ಈ ಆದೇಶ ನೀಡಿತು.
ಪೀಠದ ಅಭಿಪ್ರಾಯ
- ಈ ರೀತಿಯ ಧಾರ್ಮಿಕ ಅಥವಾ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಸರ್ಕಾರದದು.
- ಎಲ್ಲರನ್ನೂ ಮನುಷ್ಯ ಎಂಬ ದೃಷ್ಟಿಯಿಂದ ನೋಡುವುದೇ ನಿಜವಾದ ಭಾರತೀಯತೆಯ ಸೂಚನೆ.
- ಕೋಮು ಸಂಘರ್ಷದಿಂದ ಮುಕ್ತ ಹಬ್ಬಗಳ ಆಚರಣೆ ಬಹುಮುಖ್ಯ.
- ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಮುಸ್ಲಿಂ ಹಬ್ಬವನ್ನು ಆಚರಿಸುತ್ತಿರುವಾಗ, ಹಿಂದೂ ಸಮಾಜದ ಒಳಗಿನ ಮೇಲ್ಜಾತಿ ಹಾಗೂ ದಲಿತರ ನಡುವಿನ ಸಂಘರ್ಷಗಳು ಉಂಟಾಗುತ್ತಿರುವುದು ವಿಷಾದನೀಯ.
- ಇತ್ತೀಚಿನ ದಿನಗಳಲ್ಲಿ ಹಬ್ಬದ ವೇಳೆಯಲ್ಲಿ ಶಾಂತಿ ಕಾಪಾಡುವುದು ಸವಾಲಾಗಿ ಮಾರ್ಪಟ್ಟಿದೆ.
ಪೀಠದ ಸಲಹೆಗಳು
- ಎಲ್ಲ ಸಮುದಾಯಗಳು ಶಾಂತಿಯುತವಾಗಿ ಭಾಗವಹಿಸುವ ಹಬ್ಬಗಳಿಗೆ ಉತ್ತೇಜನೆ ನೀಡಬೇಕು.
- ಯಾದಗಿರಿ ಜಿಲ್ಲೆಯ ಶರಣ ಬಸವೇಶ್ವರ ದೇವಸ್ಥಾನ ಮತ್ತು ಖಾಜಾ ಬಂದನನವಾಜ್ ದರ್ಗಾ — ಕೋಮು ಸೌಹಾರ್ದತೆಯ ಉತ್ತಮ ಉದಾಹರಣೆಗಳು. ಇವು ದೇಶದಾದ್ಯಂತ ಮಾದರಿಯಾಗಬೇಕು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಮಯದಲ್ಲಿ ಹಿಂದು ಮತ್ತು ಮುಸ್ಲಿಮರು ಒಟ್ಟಾಗಿ ‘ಕಾಶಿಮಲ್ಲಿ’ ದೇವತೆಯನ್ನು ಪೂಜಿಸುತ್ತಾರೆ. ಈ ವೇಳೆ ‘ಅಲೈ ಬೋಸಾಯಿ’ ಎಂಬ ನೃತ್ಯ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದವರು ಹಲಗೆ ಹೊಡೆಯುತ್ತಿದ್ದವರು. ಆದರೆ ಇತ್ತೀಚೆಗೆ ಅವರು ಈ ವೃತ್ತಿ ತಿರಸ್ಕರಿಸಿದ್ದಾರೆ.
ಆದರೂ ಗ್ರಾಮದ ಕೆಲವರು ಅವರಿಂದಲೇ ಹಲಗೆ ಬಾರಿಸಲು ಒತ್ತಾಯಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಸಮುದಾಯ, ತಾವು ಅಸ್ಪೃಶ್ಯರಾಗಿದ್ದ ಕಾರಣದಿಂದ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ವಿಚಾರದಿಂದ ಗ್ರಾಮದಲ್ಲಿ ಮೇಲ್ಜಾತಿ ಮತ್ತು ದಲಿತರ ನಡುವೆ ಸಂಘರ್ಷ ಉಂಟಾಯಿತು.
ಈ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕ ಹಬ್ಬಗಳ ನಿಷೇಧಕ್ಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಮತ್ತು ಹೈಕೋರ್ಟ್‌ನಲ್ಲಿ ಅರ್ಜಿ ಹೂಡಿದ್ದರು.