Bilaspur (Chhattisgarh): PWD ಸಬ್-ಎಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿ ಸ್ಪೈ ಕ್ಯಾಮೆರಾ (Spy camera) ಮತ್ತು ಎಲೆಕ್ಟ್ರಾನಿಕ್ ಸಾಧನ ಬಳಸಿ ವಂಚನೆ ಮಾಡಿದ ಆರೋಪದಲ್ಲಿ ಓರ್ವ ಅಭ್ಯರ್ಥಿ ಹಾಗೂ ಆಕೆಯ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನು ಎಂಬ ಯುವತಿ ಹಾಗೂ ಆಕೆಯ ಸಹೋದರಿ ಅನುರಾಧಾ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪರೀಕ್ಷೆ ನಡೆಯುತ್ತಿದ್ದ ಸರ್ಕಂಡದ ರಾಮ್ದುಲಾರಿ ಶಾಲೆ ಹೊರಗೆ, ಅನುರಾಧಾ ಎಂಬ ಯುವತಿ ಆಟೋದಲ್ಲಿ ಕುಳಿತು ಮೈಕ್ರೊಫೋನ್ ಅಂಟಿಸಿದ್ದ ಅಂಟೆನಾದ ಮೂಲಕ ಏನೋ ಮಾತನಾಡುತ್ತಿದ್ದಾಗ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಈ ಮಾಹಿತಿ ಎನ್‌ಎಸ್‌ಯುಐಗೆ (NUSI) ನೀಡಲಾಯಿತು.
NSUI ಸದಸ್ಯರು ಸ್ಥಳಕ್ಕೆ ಧಾವಿಸಿ ವಿಚಾರಣೆ ಮಾಡಿದಾಗ, ಯುವತಿ ಸಂಶಯಾಸ್ಪದ ವರ್ತನೆ ತೋರಿದ್ದಳು. ನಂತರ ಆಟೋವನ್ನು ಪರಿಶೀಲಿಸಿದಾಗ ಟ್ಯಾಬ್ಲೆಟ್, ವೈರ್‌ಲೆಸ್ ಅಂಟೆನಾ ಹಾಗೂ ಸ್ಪೈ ಕ್ಯಾಮೆರಾ ಪತ್ತೆಯಾಯಿತು. ಈ ಮೂಲಕ ಅನು ಎಂಬ ಪರೀಕ್ಷಾರ್ಥಿ ಒಳಗೆ ಕೂತಿದ್ದವರು ಈ ಸಾಧನಗಳ ಮೂಲಕ ಉತ್ತರ ಕೇಳುತ್ತಿದ್ದಳು ಎಂಬುದು ಬಹಿರಂಗವಾಯಿತು.
ಸರ್ಕಂಡ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮಕ್ಕಾಗಿ ಬಳಸಿದ್ದ ಸಾಧನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರ ವಿರುದ್ಧ ಸೂಪರಿಂಟೆಂಡೆಂಟ್ ಬಳಿ ಪ್ರಕರಣ ದಾಖಲಿಸುವಂತೆ ಎನ್‌ಎಸ್‌ಯುಐ ಒತ್ತಾಯಿಸಿದೆ.