ಇತ್ತೀಚೆಗೆ ಹೃದಯಾಘಾತದಿಂದ (Heart Attack) ಕೊನೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಮಾತ್ರವಲ್ಲ, ಹದಿಹರೆಯದವರೂ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕೆಲವೊಮ್ಮೆ ಯಾವುದೇ ಸೂಚನೆ ಇಲ್ಲದೆ ಹೃದಯಾಘಾತವಾಗಬಹುದಾದರೂ, ಬಹುತೇಕ ವೇಳೆ ನಮ್ಮ ದೇಹ ಇದಕ್ಕೆ ಮುಂಚೆಯೇ ಸಣ್ಣ ಸೂಚನೆಗಳನ್ನು ನೀಡುತ್ತದೆ. ಆದರೆ ನಾವು ಅವನ್ನು ನೊಟಿಸ್ ಮಾಡಿಕೊಳ್ಳದೆ ನಿರ್ಲಕ್ಷಿಸುತ್ತೇವೆ.
ಸ್ವಲ್ಪ ಎದೆನೋವಿದ್ದರೂ ನಾಳೆ ಡಾಕ್ಟರ್ ಬಳಿ ಹೋಗೋಣ ಎನ್ನುತ್ತಾ ತಡಮಾಡಿದರೆ, ಆ ನಾಳೆ ಬರುವುದೇ ಇಲ್ಲ. ಕೆಲವೊಮ್ಮೆ ಎದೆ ನೋವು, ಉರಿ ಇದ್ದರೆ ಅದನ್ನು ‘ಆ್ಯಸಿಡಿಟಿ’, ‘ಹಸಿವಿನಿಂದ ಆಗಿದೆ’ ಎಂದು ಹೆಣೆದು ಕೊಳ್ಳುವ ನಾವೇ ತಪ್ಪಾಗುತ್ತೇವೆ.
ಈ ಕುರಿತಾಗಿ ಖ್ಯಾತ ಹೃದಯ ತಜ್ಞ ಡಾ. ಮಂಜುನಾಥ್ ಮಹತ್ವದ ಮಾಹಿತಿ ನೀಡಿದ್ದಾರೆ. ಅವರು ಹೇಳಿದ ಪ್ರಕಾರ, ಹೃದಯಾಘಾತದ ಮುನ್ಸೂಚನೆಗೆ ಕೇವಲ ಎದೆ ನೋವು ಅಥವಾ ಎದೆ ಉರಿಯೇ ಅಲ್ಲದೆ, ದವಡೆ ಅಥವಾ ಗಂಟಲು ನೋವೂ ಕೂಡ ಪ್ರಮುಖ ಸೂಚನೆ ಆಗಿರಬಹುದು. ಆದರೆ ಪ್ರತೀ ದವಡೆ ಅಥವಾ ಗಂಟಲು ನೋವು ಹೃದಯ ಸಂಬಂಧಿತವಲ್ಲ.
ಡಾ. ಮಂಜುನಾಥ್ ಹೇಳಿದ್ದು ಹೀಗೆ, “ನಡೆದಾಗ ಅಥವಾ ಊಟದ ಬಳಿಕ ನಡೆದಾಗ ಎದೆ ನೋವು, ಉರಿ, ಗಂಟಲು ನೋವು ಅಥವಾ ದವಡೆ ನೋವು ಕಾಣಿಸಿಕೊಂಡರೆ, ಅದು ಹೃದಯದ ಸಮಸ್ಯೆಯ ಸೂಚನೆ ಆಗಿರಬಹುದು.”
ತಜ್ಞರ ಸಲಹೆ
- 35 ವರ್ಷ ಮೇಲ್ಪಟ್ಟ ಪುರುಷರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
- ಬಿಪಿ, ಶುಗರ್, ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
- ಥ್ರೆಡ್ಮಿಲ್ ಮತ್ತು ಇಸಿಜಿ ಪರೀಕ್ಷೆ ಮಾಡಿಸಬೇಕೆಂಬುದು ಅವರ ಸಲಹೆ.
ಮುನ್ನೆಚ್ಚರಿಕೆಯಿಂದ ಬದುಕುವುದು ಉತ್ತಮ. ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಜೀವ ಉಳಿಸಬಹುದಾದ ನಿರ್ಧಾರವಾಗಬಹುದು. ಆರೋಗ್ಯ ಪರೀಕ್ಷೆ ಮಾಡುವುದರಿಂದ ಭಯಪಡಬೇಕಿಲ್ಲ; ಅದು ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ.