Mumbai: ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಕಂಪನಿ (Reliance Retail) ಇದೀಗ ಬಾಳಿಕೆ ಬರುವ ಉಪಕರಣಗಳ ಉದ್ಯಮಕ್ಕೆ ಕಾಲಿಟ್ಟಿದೆ. ಈ ಭಾಗದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು, ಪ್ರಖ್ಯಾತ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ತಯಾರಕ ಕೆಲ್ವಿನೇಟರ್ (Kelvinator company) ಅನ್ನು ಖರೀದಿಸಿದೆ ಎಂದು ಶುಕ್ರವಾರ ತಿಳಿಸಿದೆ. ಈ ಡೀಲ್ ಎಷ್ಟು ಮೊತ್ತಕ್ಕೆ ನಡೆದಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.
ಕಂಪನಿಯು ಕೆಲ್ವಿನೇಟರ್ ಬ್ರ್ಯಾಂಡ್‌ನ ನಾವೀನ್ಯತೆ ಮತ್ತು ವಿಶ್ವಾಸಾರ್ಹತೆಗಳನ್ನು ಬಳಸಿಕೊಂಡು ತನ್ನ ಚಿಲ್ಲರೆ ವ್ಯಾಪಾರ ಜಾಲವನ್ನು ಬಲಪಡಿಸಲು ಉದ್ದೇಶಿಸಿದೆ. 1970–80ರ ದಶಕಗಳಲ್ಲಿ “ದಿ ಕೂಲೆಸ್ಟ್ ಒನ್” ಎಂಬ ಟ್ಯಾಗ್ಲೈನ್ನಿಂದ ಪ್ರಸಿದ್ಧಿ ಪಡೆದ ಈ ಬ್ರ್ಯಾಂಡ್, ಇಂದಿಗೂ ಭಾರತೀಯ ಗ್ರಾಹಕರಲ್ಲಿ ಖ್ಯಾತಿಯೊಂದಿಗೆ ಮುಂದುವರೆದಿದೆ.
ಇದೊಂದು ಪ್ರಮುಖ ಹಂತವಾಗಿದೆ ಎಂದು ಇಶಾ ಅಂಬಾನಿ ಹೇಳಿದ್ದಾರೆ. “ಪ್ರತಿ ಭಾರತೀಯ ಗ್ರಾಹಕನ ಅಗತ್ಯ ಪೂರೈಸುವ ತಂತ್ರಜ್ಞಾನಾತ್ಮಕ ಮತ್ತು ಭವಿಷ್ಯಮುಖಿ ಉತ್ಪನ್ನಗಳನ್ನು ನೀಡುವುದು ನಮ್ಮ ಉದ್ದೇಶ,” ಎಂದು ಅವರು ಹೇಳಿದ್ದಾರೆ. ಈ ಒಪ್ಪಂದದಿಂದ ಭಾರತೀಯ ಗ್ರಾಹಕರಿಗೆ ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ತಲುಪಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.
ರಿಲಯನ್ಸ್ ರಿಟೇಲ್ ಈಗ ಕೆಲ್ವಿನೇಟರ್‌ನ ಶಕ್ತಿಯನ್ನೆಲ್ಲಾ ಬಳಸಿಕೊಂಡು, ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ ಮತ್ತು ಅಡುಗೆ ಉಪಕರಣಗಳ ಜತೆಗೆ ತನ್ನ ಕೊಡುಗೆಗಳನ್ನು ಹೆಚ್ಚಿಸಲು ಯೋಜಿಸಿದೆ. ಭಾರತೀಯ ಬಾಳಿಕೆ ವಸ್ತುಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಕಂಡುಹಿಡಿಯಲು ಇದು ಸಹಾಯ ಮಾಡಲಿದೆ ಎಂದು ಕಂಪನಿ ತಿಳಿಸಿದೆ.