Patna: ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ (Tejaswi) ಈಗ ವಿವಾದದಲ್ಲಿ ಸಿಲುಕಿದ್ದಾರೆ. ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ದೂರಿದ್ದರಾದರೂ, ಅವರ ಹೆಸರಿನಲ್ಲಿ ಎರಡು ಮತದಾರರ ಗುರುತಿನ ಚೀಟಿಗಳು (EPIC) ಇರುವುದನ್ನು ಚುನಾವಣಾ ಆಯೋಗ ಪತ್ತೆಹಚ್ಚಿದೆ. ಇದರ ಬಗ್ಗೆ ಆಯೋಗ ನೋಟಿಸ್ ಕೂಡ ನೀಡಿದೆ.
ತೇಜಸ್ವಿ, ಆಯೋಗದ ವೆಬ್ಸೈಟ್‌ನಲ್ಲಿ ತಮ್ಮ ವಿವರ ಪರಿಶೀಲಿಸಲು EPIC ಸಂಖ್ಯೆಯನ್ನು ನಮೂದಿಸಿದ್ದರು. ಆದರೆ ಅಲ್ಲಿ ಮಾಹಿತಿ ಲಭ್ಯವಿಲ್ಲ ಎಂದು ಅವರು ಆರೋಪಿಸಿದ್ದರು. ಆದರೆ ಈಗ ಅವರ ಬಳಿ ಎರಡು EPIC ಸಂಖ್ಯೆಗಳಿವೆ ಎಂಬುದು ಬಹಿರಂಗವಾಗಿದೆ – RAB0456228 ಮತ್ತು RAB2916120.
ಆಯೋಗದ ಪ್ರಕಾರ, ಮೊದಲ EPIC ಸಂಖ್ಯೆ 2015 ಮತ್ತು 2020ರ ದಾಖಲೆಯಲ್ಲಿದೆ. ಆದರೆ ಎರಡನೆಯ EPIC ಅಸ್ತಿತ್ವದಲ್ಲಿಲ್ಲವೆಂದು ತಿಳಿದು ಬಂದಿದೆ. ಇದು ನಕಲಿ ಇರಬಹುದೆಂದು ಆಯೋಗ ಶಂಕಿಸಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಆಯೋಗ ಆದೇಶಿಸಿದೆ.
ಇನ್ನು, ತೇಜಸ್ವಿಯವರು ಅವರು ಸ್ಪರ್ಧಿಸಲು ಪಟ್ಟಿ ಇಲ್ಲವೆಂದು ಹೇಳಿದ್ದರೂ, ಈ ವರ್ಷದ ಆಗಸ್ಟ್ 1ರಂದು ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸ್ಪಷ್ಟವಾಗಿ ಇದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಪಟ್ನಾದ ಮತದಾನ ಕೇಂದ್ರ 204ರಲ್ಲಿ ಸರಣಿ ಸಂಖ್ಯೆ 416ರಲ್ಲಿ ಅವರ ಹೆಸರು ದಾಖಲಾಗಿದ್ದು, ಇದು 2015ರ ದಾಖಲೆಗಳಿಗೂ ತಾಳಮೇಳ ಹೊಂದಿದೆ.
ಈ ಸಂದರ್ಭ ತೇಜಸ್ವಿಯ ಹೇಳಿಕೆಗಳನ್ನು ಆಯೋಗ ಆಧಾರರಹಿತವೆಂದು ತಿರಸ್ಕರಿಸಿದೆ.