Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಭಾರತೀಯ ಸೇನೆ ಬಗ್ಗೆ ಮಾಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ನಿಜವಾದ ಭಾರತೀಯನು ಹೀಗೆ ಮಾತನಾಡುವುದಿಲ್ಲ” ಎಂದು ನ್ಯಾಯಾಲಯ ಖಂಡನೆ ವ್ಯಕ್ತಪಡಿಸಿದೆ.
ರಾಹುಲ್ ಗಾಂಧಿಯವರು (Rahul Gandhi) ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಭಾರತೀಯ ಸೇನೆ ಬಗ್ಗೆ ಟೀಕಿಸಿದ್ದು, ಅದನ್ನು ಪ್ರಶ್ನಿಸಿ ಅವರಿಗೆ ವಿರುದ್ಧ ಮಾನಹಾನಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರಿಬ್ಬರೂ ರಾಹುಲ್ ಹೇಳಿಕೆಗೆ ಪ್ರಶ್ನೆ ಎತ್ತಿದರು. “ಚೀನಾ 2,000 ಕಿಲೋಮೀಟರ್ ಭೂಮಿ ವಶಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯನಾದರೆ ನೀವು ಹೀಗೆ ಹೇಳುತ್ತಿರಲಿಲ್ಲ,” ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.
ರಾಹುಲ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದಲ್ಲಿ ವಾದಿಸಿದರು: “ವಿರೋಧ ಪಕ್ಷದ ನಾಯಕನಾಗಿ ಸಮಸ್ಯೆಗಳನ್ನು ಎತ್ತುವುದು ಅವರ ಹಕ್ಕು.” ಇದಕ್ಕೆ ನ್ಯಾಯಮೂರ್ತಿಗಳು ಪ್ರತಿಯಾಗಿ, “ಸಂಸತ್ತಿನಲ್ಲಿ ಹೇಳಬಹುದು, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹೇಳುವ ಅಗತ್ಯವೇನು?” ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರು 2022ರ ಭಾರತ-ಚೀನಾ ಘರ್ಷಣೆಯ ಬಳಿಕ, “ಮಾಧ್ಯಮಗಳು ಭಾರತೀಯ ಸೈನಿಕರ ಮೇಲಿನ ಚೀನಾ ದಾಳಿ ಬಗ್ಗೆ ಕೇಳುತ್ತಿಲ್ಲ” ಎಂಬ ಮಾತುಗಳನ್ನು ಹೇಳಿದ್ದರು. ಇದೇ ವಿಷಯದ ಕುರಿತು ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ಈ ಮೊದಲು, ಅಲಹಾಬಾದ್ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ರಾಹುಲ್ ಅರ್ಜಿಯನ್ನು ಸ್ವೀಕರಿಸಿ, ಉತ್ತರ ಪ್ರದೇಶ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ. ಇದೇ ಸಮಯದಲ್ಲಿ, ಕೆಳ ನ್ಯಾಯಾಲಯದ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದೆ ಹಾಗೂ ಮುಂದಿನ ವಿಚಾರಣೆಗೆ ಮೂರು ವಾರಗಳ ಬಳಿಕ ದಿನಾಂಕ ನಿಗದಿಪಡಿಸಿದೆ.







