ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ (Urea shortage)ಇನ್ನೂ ಮುಂದುವರಿದಿದೆ. ಗೊಬ್ಬರ ಸಿಗದೆ ಬೆಳೆಗಳು ಕೊಳೆಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಗೊಬ್ಬರಕ್ಕಾಗಿ ನಸುಕಿನ ನಾಲ್ಕು ಗಂಟೆಯಲ್ಲೇ ರೈತರು ಮತ್ತು ಅವರ ಮಕ್ಕಳು ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.
ಯೂರಿಯಾ ಸಿಗಲೇಬೇಕು ಎಂಬ ಆತಂಕದಿಂದಾಗಿ ಕೆಲವು ರೈತರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೇ ಗೊಬ್ಬರ ಅಂಗಡಿಗೆ ಕರೆದೊಯ್ದಿದ್ದಾರೆ. ಆಧಾರ್ ಕಾರ್ಡ್ ಹಿಡಿದು “ನಮಗೂ ಯೂರಿಯಾ ಬೇಕು” ಎಂದು 8ನೇ, 9ನೇ ಮತ್ತು SSLC ವಿದ್ಯಾರ್ಥಿಗಳು ಸಹ ಸಾಲಿನಲ್ಲಿ ನಿಂತಿದ್ದಾರೆ.
ಜಿಲ್ಲೆಯಲ್ಲಿ ಮಳೆ ನಿಂತಿಲ್ಲ. ಜೋಳದ ಬೆಳೆಗಳು ತೇವಾಂಶದಿಂದ ಕೊಳೆಯುತ್ತಿವೆ. ಸಕಾಲದಲ್ಲಿ ಯೂರಿಯಾ ಹಾಕದಿದ್ದರೆ ಇಡೀ ಬೆಳೆ ಹಾನಿಯಾಗಲಿದೆ ಎಂದು ರೈತರು ಭೀತಿಗೆ ಒಳಗಾಗಿದ್ದಾರೆ.
ಗದಗನ ಕೆಲವು ಗೊಬ್ಬರ ಅಂಗಡಿಗಳಲ್ಲಿ ಒಬ್ಬರಿಗೆ ಒಂದೇ ಚೀಲ ಎಂದು ನಿಯಮ ಮಾಡಲಾಗಿದೆ. ಪರಿಣಾಮವಾಗಿ ರೈತರು ಕುಟುಂಬದ ಸದಸ್ಯರನ್ನೆಲ್ಲಾ ಕರೆದೊಯ್ದು ಸಾಲಿನಲ್ಲಿ ನಿಲ್ಲಿಸುತ್ತಿದ್ದಾರೆ.
“ಗೊಬ್ಬರ ಸಾಕಷ್ಟು ಸ್ಟಾಕ್ ಇದೆ. ಆದರೆ ವ್ಯಾಪಾರಿಗಳು ಕೃತಕ ಕೊರತೆ ತೋರಿಸುತ್ತಿದ್ದಾರೆ” ಎಂದು ರೈತರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಮಾತ್ರ ನಿರ್ಲಕ್ಷ್ಯ ಹಾಗೆಯೇ ಮುಂದುವರೆದಿದೆ ಎಂಬ ವಿರೋಧವೂ ವ್ಯಕ್ತವಾಗಿದೆ.
ರೈತರ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿರುವ ಈ ಸ್ಥಿತಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣವೇ ಗಮನ ಹರಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.