New Delhi: ಪ್ರಧಾನಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 2) ನವದೆಹಲಿಯಲ್ಲಿ ಸೆಮಿಕಾನ್ ಇಂಡಿಯಾ 2025 (Semicon India 2025) ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದ ಉದ್ದೇಶ ಭಾರತದಲ್ಲಿ ಸೆಮಿಕಂಡಕ್ಟರ್ ವಲಯವನ್ನು ಬಲಪಡಿಸುವುದು ಮತ್ತು ಉತ್ತೇಜಿಸುವುದಾಗಿದೆ.
ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸೆಮಿಕಾನ್ ಇಂಡಿಯಾ ಯೋಜನೆಯ ಪ್ರಗತಿ, ಸೆಮಿಕಂಡಕ್ಟರ್ ಫ್ಯಾಬ್ ಹಾಗೂ ಪ್ಯಾಕೇಜಿಂಗ್ ಯೋಜನೆ, ಮೂಲಸೌಕರ್ಯ ಸಿದ್ಧತೆ, ಸ್ಮಾರ್ಟ್ ಉತ್ಪಾದನೆ, ಸಂಶೋಧನೆ, ಕೃತಕ ಬುದ್ಧಿಮತ್ತೆ, ಹೂಡಿಕೆ ಅವಕಾಶಗಳು, ರಾಜ್ಯ ಮಟ್ಟದ ನೀತಿಗಳ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ, ಅಂತರರಾಷ್ಟ್ರೀಯ ಸಹಯೋಗ ಮತ್ತು ಭಾರತದ ಸೆಮಿಕಂಡಕ್ಟರ್ ಭವಿಷ್ಯದ ಬಗ್ಗೆ ಚರ್ಚೆ ಮಾಡಲಾಗುತ್ತದೆ.
48ಕ್ಕೂ ಹೆಚ್ಚು ದೇಶಗಳಿಂದ 2,500 ಕ್ಕೂ ಹೆಚ್ಚು ಪ್ರತಿನಿಧಿಗಳು, 150 ಕ್ಕೂ ಹೆಚ್ಚು ಭಾಷಣಕಾರರು ಹಾಗೂ 350 ಪ್ರದರ್ಶಕರು ಸೇರಿದಂತೆ 20,000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆರು ದೇಶಗಳಿಂದ ಸಿಇಒಗಳೊಂದಿಗೆ ವಿಶೇಷ ಚರ್ಚೆಗಳು ನಡೆಯಲಿವೆ.
2022ರಲ್ಲಿ ಬೆಂಗಳೂರಿನಲ್ಲಿ, 2023ರಲ್ಲಿ ಗಾಂಧಿನಗರದಲ್ಲಿ ಮತ್ತು 2024ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಈ ಸಮ್ಮೇಳನ ನಡೆದಿತ್ತು. ಈ ಬಾರಿ ನವದೆಹಲಿಯೇ ಆತಿಥ್ಯ ವಹಿಸಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ನೀಡಿ ಅರೆವಾಹಕ ಹಾಗೂ AI ವಲಯದಲ್ಲಿ 21 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಟೋಕಿಯೊ ಎಲೆಕ್ಟ್ರಾನ್ ಸೆಮಿಕಂಡಕ್ಟರ್ ಘಟಕಕ್ಕೂ ಭೇಟಿ ನೀಡಿದ್ದರು. ಜಪಾನ್ ತನ್ನ ಹಳೆಯ ತಂತ್ರಜ್ಞಾನಗಳನ್ನು ಭಾರತಕ್ಕೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ. ಇದರಿಂದ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆರ್ಥಿಕ ಭದ್ರತೆಯನ್ನು ಹೆಚ್ಚಿಸಬಹುದು.







