Bengaluru: ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಯಲ್ಲಿ (traffic fine payment) 50% ರಿಯಾಯಿತಿ ನೀಡಲಾಗಿದೆ. ಈ ಆಫರ್‌ನಿಂದಾಗಿ ಸೆಪ್ಟೆಂಬರ್ 2ರೊಳಗೆ 31.87 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.
ಇಲ್ಲಿವರೆಗೆ 11.32 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, 31,87,06,850 ರೂ. ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ರಿಯಾಯಿತಿ ಆಫರ್ ಆಗಸ್ಟ್ 23ರಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ 12ರವರೆಗೆ ಮುಂದುವರಿಯಲಿದೆ. ಆದರೆ ಇದು 2023ರ ಫೆಬ್ರವರಿ 11ರೊಳಗಿನ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ.
BTP Astram app, KSP app, ಬೆಂಗಳೂರು ಸಂಚಾರ ಪೊಲೀಸರು ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪ್ರಕರಣಗಳನ್ನು ತಿಳಿದುಕೊಳ್ಳಬಹುದು. ಬಳಿಕ ರಿಯಾಯಿತಿಯೊಂದಿಗೆ ದಂಡ ಪಾವತಿಸಬಹುದು.
ಹತ್ತಿರದ ಸಂಚಾರ ಠಾಣೆ ಅಥವಾ Infantry ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲೂ ದಂಡ ಪಾವತಿಸಬಹುದಾಗಿದೆ. ತಪ್ಪಾಗಿ ದಂಡ ವಿಧಿಸಿದರೆ ಆನ್‌ಲೈನ್ ಅಥವಾ ನಿರ್ವಹಣಾ ಕೇಂದ್ರದಲ್ಲಿ ದೂರು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
ರಿಯಾಯಿತಿ ಘೋಷಿಸಿದ ಮೊದಲ ವಾರದಲ್ಲೇ 24 ಕೋಟಿ ರೂ. ದಂಡ ಸಂಗ್ರಹಿಸಲಾಯಿತು. ಆಗಸ್ಟ್ 30ರೊಳಗೆ 8.52 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಆ ವೇಳೆಗೆ ಒಟ್ಟು 24 ಕೋಟಿ ರೂ. ಸಂಗ್ರಹಣೆ ಆಗಿತ್ತು.
ಸಂಚಾರಿ ನಿಯಮ ಉಲ್ಲಂಘನೆ ಮತ್ತು ಅದಕ್ಕೆ ಸಂಬಂಧಿಸಿದ ದಂಡದ ವಿವರಗಳಿರುವ ಡಿಜಿಟಲ್ ದಾಖಲೆ ಇ-ಚಲನ್. ಇದನ್ನು ಸಂಚಾರ ಪೊಲೀಸರು ಬಳಸುವ ವಿಶೇಷ ಸಾಧನದಲ್ಲಿ ದಾಖಲಿಸಲಾಗುತ್ತದೆ.