ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ಟೀಂ ಇಂಡಿಯಾ ಏಷ್ಯಾ ಕಪ್ 2025ನ್ನು (Asia Cup) ಗೆಲುವಿನೊಂದಿಗೆ ಆರಂಭಿಸಿತು.
ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಯುಎಇ ತಂಡವನ್ನು ಬ್ಯಾಟಿಂಗ್‌ಗೆ ಕಳಿಸಿದರು. ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ ಕಾರಣ, ಯುಎಇ ಕೇವಲ 13.1 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯಿತು. ಸ್ಪಿನ್ನರ್ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಎದುರಾಳಿಯನ್ನು ಕಟ್ಟಿಹಾಕಿದರೆ, ಶಿವಂ ದುಬೆ 3 ವಿಕೆಟ್‌ಗಳನ್ನು ಕಿತ್ತುಕೊಂಡರು. ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಯುಎಇ ಪರ ಕೇವಲ ಇಬ್ಬರು ಆಟಗಾರರು ಮಾತ್ರ ಎರಡಂಕಿಯ ರನ್ ಗಳಿಸಿದರು. ಭಾರತದ ಬೌಲಿಂಗ್ ಪಾರಮ್ಯ ಎದುರಾಳಿಯನ್ನು ಸಂಪೂರ್ಣವಾಗಿ ಮಣಿಸಿತು.
ಗುರಿ ಬೆನ್ನಟ್ಟಿದ ಭಾರತಕ್ಕೆ ಸುಲಭ ಜಯ ಸಿಕ್ಕಿತು. ಆರಂಭಿಕ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಬಾರಿಸಿ ತಂಡಕ್ಕೆ ವೇಗದ ಆರಂಭ ಒದಗಿಸಿದರು. ಅವರು 2 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಶುಭಮನ್ ಗಿಲ್ 20 ರನ್‌ಗಳ ಅಜೇಯ ಆಟದಿಂದ ಭಾರತವನ್ನು ಕೇವಲ 4.3 ಓವರ್‌ಗಳಲ್ಲಿ ಗೆಲುವಿನತ್ತ ಕರೆದೊಯ್ದರು.
ಪಾಕಿಸ್ತಾನ ವಿರುದ್ಧದ ಪ್ರಮುಖ ಪಂದ್ಯಕ್ಕೂ ಮುನ್ನ ಯುಎಇ ವಿರುದ್ಧದ ಈ ಸುಲಭ ಜಯ ಟೀಂ ಇಂಡಿಯಾಗೆ ಅಭ್ಯಾಸ ಪಂದ್ಯದಂತೆಯೇ ತೋರಿ ಬಂತು.