ಗಾಂಧಿನಗರ(ಗುಜರಾತ್): ಗಾಂಧಿನಗರದ ದಹೇಗಾಮ್ ತಾಲೂಕಿನ ಬಹಿಯಾಲ್ ಗ್ರಾಮದಲ್ಲಿ ಬುಧವಾರ ರಾತ್ರಿ ನವರಾತ್ರಿ ಗರ್ಭಾ ಕಾರ್ಯಕ್ರಮದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತು. ಇದು ಹಿಂಸೆಗೆ ತಿರುಗಿ ಕಲ್ಲು ತೂರಾಟ, ಮನೆ ಮತ್ತು ಅಂಗಡಿಗಳಿಗೆ ಹಾನಿ, ಬೆಂಕಿ ಹಚ್ಚುವ ಘಟನೆ ನಡೆಯಿತು.ದಹೇಗಾಮ್ ಎಎಸ್ಪಿ ಆಯುಷ್ಯ ಜೈನ್ ಹೇಳುವ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಬಂದಿದ್ದ ಒಂದು ಪೋಸ್ಟ್‌ನಿಂದ ಈ ಘರ್ಷಣೆ ಉಂಟಾಗಿದೆ. ಕಿಡಿಗೇಡಿಗಳು ಕಲ್ಲು ತೂರಿ ಅಂಗಡಿಗಳು, ವಾಹನಗಳನ್ನು ಹಾನಿಗೊಳಿಸಿದರು.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಕೆಲವರಿಗೆ ಸಣ್ಣ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಅಂಗಡಿಗಳಿಗೆ ಹಚ್ಚಿದ್ದ ಬೆಂಕಿಯನ್ನು ಕೂಡಾ ನಂದಿಸಲಾಯಿತು. ದಾಳಿಯಲ್ಲಿ ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ.
ಪರಿಸ್ಥಿತಿ ಉಲ್ಬಣಗೊಳ್ಳದಂತೆ ಎರಡು ವಿಶೇಷ ಮೀಸಲು ಪೊಲೀಸ್ ಪಡೆ ಹಾಗೂ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯಲ್ಲಿ ಸುಮಾರು 60 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿದ್ದ ಲಡಾಖ್ನಲ್ಲಿ ಬುಧವಾರ ಪ್ರತಿಭಟನೆ ಹಿಂಸೆಗೆ ತಿರುಗಿತು. ಐವರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕರ್ಫ್ಯೂ ಹೇರಲಾಗಿದ್ದು, 50 ಮಂದಿಯನ್ನು ಬಂಧಿಸಲಾಗಿದೆ. ಜನರು ಮತ್ತು ರಾಜಕೀಯ ನಾಯಕರು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.