ಇತ್ತೀಚೆಗೆ ಇಂಡಿಯಾನಾದಲ್ಲಿ ನಡೆದ ‘ಲೈವ್ ಫೈರ್ ಟ್ರಯಲ್’ ನಲ್ಲಿ ಅಮೆರಿಕದ ಎಲೆಕ್ಟ್ರಾನಿಕ್ಸ್ ಯುದ್ಧ ತಜ್ಞ ಎಪಿರಸ್ ತನ್ನ ಪ್ರಮುಖ ಲಿಯೊನಿಡಾಸ್ ಆಯುಧವನ್ನು ಪ್ರದರ್ಶಿಸಿತು. ಈ ಆಯುಧವು ಒಂದೇ ಹೊಡೆತದಲ್ಲಿ 49 ಮಾನವರಹಿತ ವೈಮಾನಿಕ ವಾಹನಗಳನ್ನು (UAV) ನಿಷ್ಕ್ರಿಯಗೊಳಿಸುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತು. ಪ್ರದರ್ಶನದ ವಿಡಿಯೋ ಇಂಟರ್ನೆಟ್ನಲ್ಲಿ ಭಾರೀ ಚರ್ಚೆ ಮೂಡಿಸಿದೆ.
ಲಿಯೊನಿಡಾಸ್ ಎಂದರೇನು?: ಲಿಯೊನಿಡಾಸ್ ಒಂದು ಹೈ-ಪವರ್ ಮೈಕ್ರೋವೇವ್ (HPM) ಆಧಾರಿತ ಆಂಟಿ-ಡ್ರೋನ್ ಆಯುಧ ವ್ಯವಸ್ಥೆ. 2022ರಿಂದ ಅಮೆರಿಕನ್ ಕಂಪನಿ ಎಪಿರಸ್ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಲಿಯೊನಿಡಾಸ್ ವ್ಯವಸ್ಥೆ ಏಕಕಾಲದಲ್ಲಿ ಬಹು ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಅವುಗಳ ಎಲೆಕ್ಟ್ರಾನಿಕ್ ವ್ಯವಸ್ಥೆಗಳಿಗೆ ಹಾನಿ ಮಾಡುತ್ತದೆ. ಡೆಮೊ ಸಮಯದಲ್ಲಿ ಇತ್ತೀಚಿನ ಆವೃತ್ತಿಯು 61 ಡ್ರೋನ್ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ. ಒಂದು ಹೊಡೆತದಲ್ಲಿ 49 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತೊಂದು ವಿಶೇಷತೆಯಾಗಿದೆ.
ಥರ್ಮೋಪೈಲೇ ಕದನದಲ್ಲಿ ಪರ್ಷಿಯನ್ ದಂಡಯಾತ್ರೆಯನ್ನು ಕಡಿಮೆ ಶಕ್ತಿಯಿಂದ ನಿಲ್ಲಿಸಿದ ಸ್ಪಾರ್ಟಾದ ರಾಜನ ಹೆಸರು ‘ಲಿಯೋನಿಡಾಸ್’. ಸಣ್ಣ ಡ್ರೋನ್ ಗಳ ಎಲೆಕ್ಟ್ರಾನಿಕ್ಸ್ ಸುಟ್ಟುಹಾಕಲು ದೀರ್ಘ-ಪಲ್ಸ್ ಮೈಕ್ರೋವೇವ್ ಕಿರಣಗಳನ್ನು ಬಳಸುವ ಶಸ್ತ್ರಾಸ್ತ್ರಗಳಲ್ಲಿ ಈ ಆಯುಧವು ಸೇರಿದೆ.
ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಡ್ರೋನ್ ಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಲಿಯೊನಿಡಾಸ್ ವ್ಯವಸ್ಥೆಯನ್ನು ತಯಾರಿಸಲಾಗಿದೆ. ಸಾಂಪ್ರದಾಯಿಕ ಕ್ಷಿಪಣಿಗಳು ಮತ್ತು ಲೇಸರ್ ಶಸ್ತ್ರಾಸ್ತ್ರಗಳ ಮಿತಿಗಳನ್ನು ನಿವಾರಿಸಲು ಇದು ಪರ್ಯಾಯವನ್ನು ಒದಗಿಸುತ್ತದೆ.
ಪ್ರಮುಖ ಪ್ರಯೋಜನಗಳು
- ಬಹು-ಗುರಿ ಸಾಮರ್ಥ್ಯ: ಏಕಕಾಲದಲ್ಲಿ ಹಲವು ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಬಹುದು.
- ಕಡಿಮೆ ವೆಚ್ಚ: ಡ್ರೋನ್ಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದ ಪರಿಹಾರ.
- ವೇಗದ ಪರಿಣಾಮ: ಮೈಕ್ರೋವೇವ್ ಶಕ್ತಿ ಬೆಳಕಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.
- ವಿಶಾಲ ವ್ಯಾಪ್ತಿ: ಏಕಕಾಲದಲ್ಲಿ ದೊಡ್ಡ ಪ್ರದೇಶದಲ್ಲಿ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯ.
ಈ ವ್ಯವಸ್ಥೆ ಡ್ರೋನ್ ಗಳ ಬೆದರಿಕೆಯನ್ನು ಎದುರಿಸುವುದರಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.