Tibet: ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ (Mount Everest) ಭಾರೀ ಹಿಮ ಬಿರುಗಾಳಿ ಉಂಟಾಗಿ ಅನಾಹುತ ಸೃಷ್ಟಿಯಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಪರ್ವತಾರೋಹಿಗಳು ಎವರೆಸ್ಟ್ ಶಿಖರದ ಹಿಮಭರಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಟಿಬೆಟ್ ನಲ್ಲಿ ಶುಕ್ರವಾರ ಸಂಜೆಯಿಂದ ಹಿಮಪಾತ ಆರಂಭವಾಗಿ, ಭಾನುವಾರಕ್ಕೆ ಅದು ಭಾರೀ ಹಿಮ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಇದರ ಪರಿಣಾಮವಾಗಿ ಅನೇಕ ಪರ್ವತಾರೋಹಿಗಳು ಶಿಬಿರಗಳಲ್ಲೇ ಸಿಲುಕಿಕೊಂಡಿದ್ದಾರೆ. ಈಗಾಗಲೇ ಸುಮಾರು 350 ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಕುಡಾಂಗ್ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಎವರೆಸ್ಟ್‌ಗೆ ಹೋಗುವ ದಾರಿಗಳು ಹಿಮದಿಂದ ಮುಚ್ಚಲ್ಪಟ್ಟಿವೆ.
ಕುಡಾಂಗ್ ತಲುಪಿದ ಚಾರಣ ತಂಡದ ಸದಸ್ಯ ಚೆನ್ ಗೆಶುವಾಂಗ್ ಹೇಳಿದ್ದಾರೆ: “ಹವಾಮಾನ ತುಂಬಾ ಶೀತ ಮತ್ತು ತೇವವಾಗಿದೆ. ಈ ಬಾರಿ ಎವರೆಸ್ಟ್‌ನ ಹವಾಮಾನ ತುಂಬಾ ಅಪಾಯಕಾರಿ. ಅಕ್ಟೋಬರ್ ತಿಂಗಳಲ್ಲಿ ಇಷ್ಟು ತೀವ್ರ ಚಳಿಯನ್ನು ನಾನು ಎಂದೂ ನೋಡಿಲ್ಲ,” ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಪ್ರಸ್ತುತ ರಜಾದಿನಗಳಿರುವುದರಿಂದ ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದೇ ವೇಳೆ ಹಿಮ ಬಿರುಗಾಳಿಯಿಂದ ಪರ್ವತದ ಮೇಲೆ ಸಿಲುಕಿಕೊಂಡವರು ತೀವ್ರ ಚಳಿಯಿಂದ ನರಳುತ್ತಿದ್ದಾರೆ. ಕೆಲವರು ಲಘು ಹೈಪೋಥರ್ಮಿಯಾ (ಶರೀರದ ಉಷ್ಣತೆ ಕುಸಿತ) ನಿಂದ ಬಳಲುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಎವರೆಸ್ಟ್ ಏರುವ ಅನುಮತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದರ ಜೊತೆಗೆ, ನೇಪಾಳದಲ್ಲಿ ಭಾರೀ ಮಳೆಯು ಮುಂದುವರಿಯುತ್ತಿದ್ದು, ಪ್ರವಾಹ ಮತ್ತು ಭೂಕುಸಿತಗಳಿಂದ 52 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಸಿ ಪ್ರಾಂತ್ಯದ ಇಲಾಮ್ ಜಿಲ್ಲೆಯಲ್ಲಿ 37 ಜನರ ಸಾವು ಸಂಭವಿಸಿದೆ. ಹಲವು ನದಿಗಳು ಉಕ್ಕಿ ಹರಿಯುತ್ತಿವೆ.
ಈ ವಿಪತ್ತು ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದು, “ಈ ಕಷ್ಟದ ಸಮಯದಲ್ಲಿ ಭಾರತ ನೇಪಾಳದ ಜನರ ಬೆಂಬಲಕ್ಕೆ ನಿಲ್ಲುತ್ತದೆ,” ಎಂದು ತಿಳಿಸಿದ್ದಾರೆ. ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದೂ ಅವರು ಹೇಳಿದರು. ಇದೇ ರೀತಿ ಭೂತಾನ್‌ನಲ್ಲಿಯೂ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಭಾರತೀಯ ಸೇನೆ ಅಲ್ಲಿ ಸಹಾಯ ಕಾರ್ಯದಲ್ಲಿ ತೊಡಗಿದೆ.