Washington: ಅಮೆರಿಕ ಮತ್ತು ಪಾಕಿಸ್ತಾನ ಮಧ್ಯೆ ರಹಸ್ಯ ಕ್ಷಿಪಣಿ ರಕ್ಷಣಾ ಒಪ್ಪಂದ (US-Pakistan Missile Deal) ನಡೆಸಲಾಗಿದೆ. ಇದರ ಮೂಲಕ ಪಾಕಿಸ್ತಾನವು ಅಮೆರಿಕದಿಂದ AIM-120 ಅಡ್ವಾನ್ಸ್ಡ್ ಮೀಡಿಯಂ-ರೇಂಜ್ ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆಯಬಹುದಾಗಿದೆ.
ಈ ಒಪ್ಪಂದವು ಅಮೆರಿಕದ ಯುದ್ಧ ಇಲಾಖೆಯ ಇತ್ತೀಚಿನ ಒಪ್ಪಂದಗಳ ಭಾಗವಾಗಿದೆ. ಈ ಒಪ್ಪಂದವು ಬ್ರಿಟನ್, ಜರ್ಮನಿ, ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್ ಸೇರಿದಂತೆ ಹಲವಾರು ದೇಶಗಳೊಂದಿಗೆ ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟದ ಜತೆ ಸೇರಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಡುವಿನ ಸಭೆಯ ಕೆಲವು ದಿನಗಳ ನಂತರ ಈ ಒಪ್ಪಂದ ಕೈಗೊಂಡಿದೆ. ಈ ಭೇಟಿಯಲ್ಲಿ ಭಾರತ–ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ತನ್ನ ಪಾತ್ರ ವಹಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.
ರಕ್ಷಣಾ ತಜ್ಞರು ಹೇಳುವಂತೆ, ಈ ಒಪ್ಪಂದ ಪಾಕಿಸ್ತಾನ–ಅಮೆರಿಕ ನಡುವೆ ಹೊಸ ಶಕ್ತಿ ಸಮಿಕರಣದ ಸೂಚನೆ. ಅಮೆರಿಕ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಸಮತೋಲನಗೊಳಿಸಲು ಇದನ್ನು ಬಳಸಬಹುದು.
ಈ ಕ್ಷಿಪಣಿ ಒಪ್ಪಂದದಿಂದ ಪಾಕಿಸ್ತಾನ ತನ್ನ F-16 ಫೈಟರ್ ಜೆಟ್ ಫ್ಲೀಟ್ ನವೀಕರಿಸಬಹುದು. AIM-120 AMRAAM ಕ್ಷಿಪಣಿಗಳನ್ನು F-16 ವಿಮಾನಗಳೊಂದಿಗೆ ಬಳಸಬಹುದು. 2019 ರ ಫೆಬ್ರವರಿಯಲ್ಲಿ ಭಾರತ–ಪಾಕಿಸ್ತಾನ ವೈಮಾನಿಕ ಘರ್ಷಣೆಯ ವೇಳೆ ಪಾಕಿಸ್ತಾನವು ಇದೇ ಕ್ಷಿಪಣಿಗಳನ್ನು ಬಳಸಿತ್ತು. ಈ ಒಪ್ಪಂದವು F-16 ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಪಾಕಿಸ್ತಾನ AIM-120 ಕ್ಷಿಪಣಿಗಳನ್ನು ಸ್ವೀಕರಿಸುವ ಮೂಲಕ ತನ್ನ ವಾಯು ಶಕ್ತಿಯನ್ನು ಹೆಚ್ಚಿಸಬಹುದು. ಇನ್ನು ಭಾರತ ಈಗಾಗಲೇ ರಫೇಲ್ ಮತ್ತು ಸುಖೋಯ್-30MKI ಯುದ್ಧವಿಮಾನಗಳನ್ನು ಹೊಂದಿದ್ದು, ಮೆಟಿಯೋರ್ ಕ್ಷಿಪಣಿಗಳನ್ನು ಬಳಸುತ್ತಿದೆ.