Jerusalem: ತನ್ನ ಮೇಲಿನ ದಾಳಿಗೆ ಪ್ರತಿಕಾರವಾಗಿ ಇರಾನ್‌ನ (Iran) ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ (Israel) ತಿಳಿಸಿದೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಖಂಡಾಂತರ ಕ್ಷಿಪಣಿಗಳ (missile) ಸುರಿಮಳೆಗರೆದಿತ್ತು.
ಸುಮಾರು 200 ಕ್ಷಿಪಣಿಗಳನ್ನು ಅದು ಉಡಾಯಿಸಿತ್ತು. ಕಳೆದ ಆರು ತಿಂಗಳಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ನೇರ ದಾಳಿ ಇದಾಗಿತ್ತು. ಇದಕ್ಕೆ ಇಸ್ರೇಲ್ ಸೇಡು ತೀರಿಸಿಕೊಳ್ಳುವುದು ನಿರೀಕ್ಷಿತವಾಗಿತ್ತು.
ಇರಾನ್‌ನ ಅನೇಕ ಸ್ಥಳಗಳಲ್ಲಿನ ಸೇನಾ ನೆಲೆಗಳ ಮೇಲೆ ನಿಖರ ಹಾಗೂ ನಿರ್ದಿಷ್ಟ ದಾಳಿಗಳನ್ನು ಐಡಿಎಫ್ ಪೂರ್ಣಗೊಳಿಸಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದೆ. “ನಮ್ಮ ಯುದ್ಧ ವಿಮಾನಗಳು ತಾಯ್ನಾಡಿಗೆ ಮರಳಿವೆ.
ಇತ್ತೀಚಿನ ತಿಂಗಳಲ್ಲಿ ಇಸ್ರೇಲ್ ದೇಶ ಹಾಗೂ ನಾಗರಿಕರ ವಿರುದ್ಧದ ಇರಾನಿಯನ್ ಆಡಳಿತದ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ. ಪ್ರತೀಕಾರದ ದಾಳಿಯು ಪೂರ್ಣಗೊಂಡಿದ್ದು, ಯೋಜನೆ ಫಲಪ್ರದಗೊಂಡಿದೆ” ಎಂದು ಇಸ್ರೇಲ್ ತಿಳಿಸಿದೆ.
ಇಸ್ರೇಲ್ ನೆಲದ ಮೇಲಿನ ಕ್ಷಿಪಣಿ ದಾಳಿಗಳು ಸೇರಿದಂತೆ ಟೆಹರಾನ್ ಮತ್ತು ಅದರ ಮಿತ್ರ ಬಣಗಳ ಆಕ್ರಮಣಕ್ಕೆ ಪ್ರತಿಕ್ರಿಯೆ ನೀಡುವುದು ತನ್ನ ಹಕ್ಕು ಮತ್ತು ಕರ್ತವ್ಯ ಎಂದು ಇಸ್ರೇಲ್ ಪ್ರತಿಪಾದಿಸಿದೆ.
“ನಮ್ಮ ರಕ್ಷಣಾ ಹಾಗೂ ಆಕ್ರಮಣದ ಸಾಮರ್ಥ್ಯಗಳನ್ನು ಸಂಪೂರ್ಣ ಸನ್ನದ್ಧಗೊಳಿಸಲಾಗಿದೆ” ಎಂದು ಅದು ತಿಳಿಸಿದೆ. ಆದರೆ ಈ ದಾಳಿಯಲ್ಲಿ ಉಂಟಾಗಿರುವ ಹಾನಿ ಪ್ರಮಾಣ ಹಾಗೂ ಸಾವು ನೋವುಗಳ ವಿವರ ಖಚಿತವಾಗಿಲ್ಲ.
ರಾಜಧಾನಿ ಟೆಹರಾನ್ ಸುತ್ತಮುತ್ತ ಪ್ರಬಲ ಸ್ಫೋಟದ ಸದ್ದುಗಳು ಕೇಳಿಬಂದಿದ್ದಾಗಿ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.
ಆದರೆ ರಾಕೆಟ್ ಅಥವಾ ವಿಮಾನಗಳ ಯಾವುದೇ ಸದ್ದು ಟೆಹರಾನ್‌ನಲ್ಲಿ ಈವರೆಗೂ ವರದಿಯಾಗಿಲ್ಲ ಎಂದು ತಸ್ನಿಮ್ ಮಾಧ್ಯಮ ವರದಿ ಮಾಡಿದೆ. ಸ್ಫೋಟದ ಮೂಲವು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯ ಸಕ್ರಿಯಾ ಪ್ರಕ್ರಿಯೆ ಇರಬಹುದು ಎಂದು ಇರಾನ್ ಗುಪ್ತಚರ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.