Kolar : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ಸಂಭ್ರಮದ ಅಂಗವಾಗಿ ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India), ಕಲ್ಯಾಣ ಗ್ರೂಪ್, ಲ್ಯಾಂಕೊ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಎಸ್. ಮುನಿಸ್ವಾಮಿ (S Muniswamy) ” ಅಮೃತ ಸರೋವರ ಯೋಜನೆಯಡಿ ಹೆದ್ದಾರಿ ಪ್ರಾಧಿಕಾರಕ್ಕೆ ಕೆರೆಗಳ ಪುನಶ್ಚೇತನ ಹೊಣೆ ನೀಡಿದ್ದು, CAR ನಿಧಿಯನ್ನು 2,800 ಕೆರೆಗಳಿಗೆ ಕೋಲಾರ ಜಿಲ್ಲೆಯಲ್ಲಿ ಬಳಸಬೇಕು. ಕೆ. ಆರ್. ಪುರಂನಿಂದ ರಾಜ್ಯದ ಗಡಿ ನಂಗಲಿವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು 6 ಪಥಕ್ಕೆ ವಿಸ್ತರಿಸುವ ಯೋಜನೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದು, ಇನ್ನು 45 ದಿನಗಳಲ್ಲಿ ಸಮಗ್ರ ಯೋಜನಾ ವರದಿ (DPR) ಸಲ್ಲಿಸಲಾಗುವುದು. ರಾಜ್ಯದಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು ಸದ್ಯ 4 ಪಥಗಳಿದ್ದು, ವಾಹನ ಸಂಖ್ಯೆ ಅಧಿಕವಾಗಿರುವುದರಿಂದ ಒತ್ತಡ ಹೆಚ್ಚಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರ ಜೀವ ರಕ್ಷಣೆಗಾಗಿ ಸದ್ಯ 40 ಕಿ.ಮೀ.ಗೆ ಒಂದರಂತೆ ಆಂಬುಲೆನ್ಸ್ ಇವೆ, ಅದನ್ನು 20 ಕಿ.ಮೀ.ಗೆ ಒಂದರಂತೆ ನೀಡಲು ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. 6 ಪಥದ ರಸ್ತೆಗೆ ವಿಸ್ತರಣೆಗೊಂಡರೆ ಕೋಲಾರ ಭಾಗಕ್ಕೆ ಮತ್ತಷ್ಟು ಕೈಗಾರಿಕೆಗಳು ಬರಲಿವೆ” ಎಂದು ತಿಳಿಸಿದರು.
ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವಾಥೋರ್, ಅರಾಭಿಕೊತ್ತನೂರು ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್. ಪ್ರದೀಪ್ ಕುಮಾರ್, ಕೋಲಾರ ತಹಶೀಲ್ದಾರ್ ನಾಗರಾಜ್, ನಗರಸಭಾ ಸದಸ್ಯ ಮುರಳೀಗೌಡ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಕರ್ನಲ್ ಎ.ಕೆ. ಜಾನ್‌ಬಾಜ್, ಕಲ್ಯಾಣ ಗ್ರೂಪ್‌ನ ಸತೀಶ್ ಎಂಗ್ಲೆ, ರಾಜೇಂದ್ರ ನವರತ್ನಭ್ ಮತ್ತಿತ್ತರರು ಉಪಸ್ಥಿತರಿದ್ದರು.