Sandalwood ನ ಕ್ರಿಕೆಟ್ ಅಂದಾಕ್ಷಣ ಮೊದಲು ನೆನಪಾಗೋದು ಕಿಚ್ಚ ಸುದೀಪ್. (Kiccha Sudeep) ರಾಜ್‌ಕಪ್, ಸಿಸಿಎಲ್, ಕೆಸಿಸಿಗಳನ್ನು ರೂಪಿಸಿದ ಅವರು ಈಗ ಹೊಸ ಕ್ಷೇತ್ರವೊಂದಕ್ಕೆ ಕಾಲಿಟ್ಟಿದ್ದಾರೆ.
ಸುದೀಪ್ ಈಗ ಕಾರ್ ರೇಸಿಂಗ್ ಕ್ಷೇತ್ರದತ್ತ ಮುನ್ನುಗ್ಗಿದ್ದು, ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ಎಂಬ ತಂಡದ ಮಾಲೀಕರಾಗಿದ್ದಾರೆ. ಈ ತಂಡವು ಇಂಡಿಯನ್ ಕಾರ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಸ್ಪರ್ಧಿಸಲಿದೆ. ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮಾರಂಭದಲ್ಲಿ ಸುದೀಪ್, ಅವರ ಪತ್ನಿ ಪ್ರಿಯಾ, RPPL ಅಧ್ಯಕ್ಷ ಅಖಿಲೇಶ್ ರೆಡ್ಡಿ ಹಾಗೂ ಹ್ಯಾರಿಸ್ ನಲಪಾಡ್ ಉಪಸ್ಥಿತರಿದ್ದರು.
ಸುದೀಪ್ ಪತ್ನಿ ಪ್ರಿಯಾ ಅವರು ತಂಡದ ಲೋಗೋ ಮತ್ತು ಹೆಸರನ್ನು ಅಧಿಕೃತವಾಗಿ ಲಾಂಚ್ ಮಾಡಿದರು. ಜೊತೆಗೆ, ತಂಡದ ಎರಡು ರೇಸಿಂಗ್ ಕಾರುಗಳನ್ನೂ ಅನಾವರಣ ಮಾಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, “ಇದು ಕೇವಲ ತಂಡವಲ್ಲ, ಇದು ಭಾವನೆ. ನನಗೆ ಸ್ಪೋರ್ಟ್ಸ್ ತುಂಬಾ ಇಷ್ಟ. ನಾನು ಕಾರು ಓಡಿಸಲು ಲೈಸೆನ್ಸ್ ಇಲ್ಲ. ನನ್ನ ಮೊದಲ ಕಾರು ಮಾರುತಿ 800, ಅದು ತಂದೆಯವರದ್ದು. ಡ್ರೈವಿಂಗ್ ಕಲಿಯುವಾಗಲೇ ಆಕ್ಸಿಡೆಂಟ್ ಆಯ್ತು,” ಎಂದು ಶೇರ್ ಮಾಡಿದರು.
ಈ ರೇಸಿಂಗ್ ಲೀಗ್ ಆಗಸ್ಟ್ 2025ರಲ್ಲಿ ಆರಂಭವಾಗಲಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರೆ ನಗರಗಳ ತಂಡಗಳು ಸ್ಪರ್ಧಿಸಲಿವೆ. ಈ ಲೀಗ್ ಭಾರತದಲ್ಲಿ ಕ್ರೀಡೆ ಮತ್ತು ಮನರಂಜನೆಯ ಹೊಸ ತಲೆಮಾರಿಗೆ ದಾರಿ ತೆರೆದು ಕೊಡಲಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದೀಗ ರೇಸಿಂಗ್ ಮಾಲೀಕರಾಗಿ ಹೊಸ ಹಾದಿ ಹಿಡಿದುಕೊಂಡಿದ್ದಾರೆ. ಸಿನಿಮಾ, ಕ್ರಿಕೆಟ್ ನಂತರ ಇದೀಗ ಕಾರ್ ರೇಸಿಂಗ್‌ನಲ್ಲಿ ಕನ್ನಡಿಗರ ಹೆಮ್ಮೆ ತೋರಿಸಲಿದ್ದಾರೆ.