Patna (Bihar): ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕೇಂದ್ರ ಗೃಹ ಸಚಿವೆ ಅಮಿತ್ ಶಾ (Union Home Minister Amit Shah) ಭೇಟಿ ನೀಡಲಿದ್ದಾರೆ. ಅವರು ಸಂಘಟನಾತ್ಮಕ ಸಭೆ ನಡೆಸಿ, ಮೈತ್ರಿ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಸಾರ್ವಜನಿಕ ಸಭೆಗಳಲ್ಲಿ ಚುನಾವಣಾ ಪ್ರಚಾರ ಮಾಡುವರು.
ಬಿಜೆಪಿ ಈಗಾಗಲೇ ತಮ್ಮ ಹಂಚಿಕೆಯ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪ್ರವಾಸದ ವೇಳೆ ಕೆಲವು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಅಮಿತ್ ಶಾ ಹಾಜರಿರುವ ಸಾಧ್ಯತೆಯಿದೆ.
ಬಿಜೆಪಿಯ ಹಿರಿಯ ನಾಯಕರು ತಿಳಿಸಿರುವಂತೆ, ಎನ್ಡಿಎ ಮೈತ್ರಿಯ ಎಲ್ಲ ಘಟಕಗಳಿಗೆ ಗುರುವಾರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಎಲ್ಲ 243 ಕ್ಷೇತ್ರಗಳಲ್ಲಿಯೂ ನಾಮಪತ್ರ ಸಲ್ಲಿಕೆ ನಡೆಯಲಿದೆ. ಉತ್ತಮ ಸಮನ್ವಯ ಖಚಿತಪಡಿಸಲು ಪಕ್ಷದ ಎಲ್ಲಾ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಲಿದ್ದಾರೆ.
ಅಕ್ಟೋಬರ್ 20 ರವರೆಗೆ ನಡೆಯಲಿರುವ ಎರಡೂ ಹಂತಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಉನ್ನತ ಬಿಜೆಪಿ ನಾಯಕರೂ ಬಿಹಾರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುನ್ನ ಬಿಹಾರದಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ. 243 ಸದಸ್ಯರ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ಬಿಜೆಪಿ ಇಂದು 18 ಅಭ್ಯರ್ಥಿಗಳ ಘೋಷಣೆ ಮೂಲಕ ಎನ್ಡಿಎ ಮೈತ್ರಿಕೂಟದ ಹಂಚಿಕೆಯ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಎನ್ಡಿಎ ಅಡಿಯಲ್ಲಿ ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು 29 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ.







