Ahmedabad: ಗುಜರಾತ್‌ನಲ್ಲಿ ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ (Bullet Train Project Site) ಅಪಘಾತ ಸಂಭವಿಸಿದೆ. ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ ಆಕಸ್ಮಿಕವಾಗಿ ಜಾರಿದ್ದು, ಪಕ್ಕದ ರೈಲು ಮಾರ್ಗದ ಮೇಲೆ ಬಿದ್ದಿದೆ. ಇದು ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಮಾರ್ಗದ ಭಾಗವಾಗಿತ್ತು. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಟ್ವಾದಲ್ಲಿ ಈ ಅಪಘಾತ ನಡೆದಿದೆ ಎಂದು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಮಾಹಿತಿ ನೀಡಿದೆ.
ಈ ಘಟನೆ ಪರಿಣಾಮ 25 ರೈಲುಗಳು ರದ್ದುಗೊಂಡಿದ್ದು, 15 ರೈಲುಗಳು ಭಾಗಶಃ ರದ್ದು ಮಾಡಲಾಗಿದೆ. ಐದು ರೈಲುಗಳ ವೇಳಾಪಟ್ಟಿ ಮರು ನಿಗದಿಪಡಿಸಲಾಗಿದ್ದು, ಆರು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಹಾನಿಗೊಳಗಾದ ರೈಲು ಮಾರ್ಗವನ್ನು ಸರಿಪಡಿಸಲು ಗ್ಯಾಂಟ್ರಿ ತೆಗೆಯುವ ಕೆಲಸ ನಡೆಯುತ್ತಿದೆ. ಕ್ರೇನ್ ಸಹಾಯದಿಂದ ಹಳಿಗಳನ್ನು ಪುನಃ ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರದ್ದುಗೊಂಡ ಪ್ರಮುಖ ರೈಲುಗಳು
- ವತ್ವಾ-ಬೋರಿವಲಿ ಎಕ್ಸ್‌ಪ್ರೆಸ್
- ಅಹಮದಾಬಾದ್-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್
- ವಡೋದರಾ-ವತ್ವಾ ಇಂಟರ್ಸಿಟಿ
- ಅಹಮದಾಬಾದ್-ವಲ್ಸಾದ್ ಗುಜರಾತ್ ಕ್ವೀನ್
- ಜಾಮ್ನಗರ-ವಡೋದರಾ ಇಂಟರ್ಸಿಟಿ
- ವದ್ನಗರ-ವಲ್ಸಾದ್-ವದ್ನಗರ ಎಕ್ಸ್‌ಪ್ರೆಸ್
- ವತ್ವಾ-ಆನಂದ್ ಮೆಮು
ಇಲ್ಲದೆ, ಅಹಮದಾಬಾದ್-ಮಜಿತಿಯಾ ಚೆನ್ನೈ ಸೆಂಟ್ರಲ್ ಹಮ್ಸಫರ್ ಎಕ್ಸ್‌ಪ್ರೆಸ್, ರಾಜ್ಕೋಟ್-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ರೈಲುಗಳ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದೆ. ರೈಲ್ವೆ ಇಲಾಖೆ ಪ್ರಯಾಣಿಕರ ಸಹಾಯಕ್ಕಾಗಿ ಹೆಲ್ಪ್‌ಲೈನ್ ಸಂಖ್ಯೆ ಕೂಡ ನೀಡಿದೆ.