Amaravati: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Andhra Pradesh Deputy Chief Minister Pawan Kalyan) ಅವರಿಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ.
ಅರಪಚಿತ ವ್ಯಕ್ತಿಯೊಬ್ಬರು ಪವನ್ ಕಲ್ಯಾಣ್ ಕಚೇರಿಗೆ ದೂರವಾಣಿ ಕರೆ ಮಾಡಿ, ಆಕ್ಷೇಪಾರ್ಹ ಪದಗಳನ್ನು ಬಳಸಿ ಜೀವ ಬೆದರಿಕೆ ಹಾಕಿದ್ದಾನೆ. “ನಾವು ಅವರ ಪಕ್ಕದಲ್ಲೇ ಇದ್ದೇವೆ, ಅವರನ್ನು ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾನೆ. ಈ ಘಟನೆಯಿಂದ ಆತಂಕಗೊಂಡ ಪವನ್ ಕಲ್ಯಾಣ್ ಸಿಬ್ಬಂದಿ ತಕ್ಷಣವೇ ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳು ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪವನ್ ಕಲ್ಯಾಣ್ ಹೊರತಾಗಿ ಇತರ ಸಚಿವರಿಗೆ ಇಂತಹ ಕರೆಗಳು ಬಂದಿರುವುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕರೆಯಾದ ಸಮಯ ಮತ್ತು ಅದರ ಹಿಂದೆ ಇರುವ ಕಾರಣಗಳ ಕುರಿತು ವಿವರವಾದ ತನಿಖೆ ಮಾಡಲಾಗುತ್ತಿದೆ.
ಹಿಂದೆಂದೂ ಇಲ್ಲದ ರೀತಿಯಲ್ಲಿ ಪವನ್ ಗೆ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.