ತಿರುಪತಿ (Tirupati) ಟೋಕನ್ ವಿತರಣೆ ಕೇಂದ್ರದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಮೃತಪಟ್ಟಿದ್ದು, 48 ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲು ಆಂಧ್ರಪ್ರದೇಶ ಸರ್ಕಾರ (Andhra government) ಘೋಷಿಸಿದೆ.
ತಿರುಪತಿ ಬೈರಾಗಿಪಟ್ಟೇಡದಲ್ಲಿ ಗುರುವಾರ ಈ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ರುಯಾ ಮತ್ತು ಸ್ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಲ್ತುಳಿತದ ಪ್ರಕರಣವನ್ನು ಪೂರ್ವ PS ನಲ್ಲಿ ಬಿಎನ್ಎಸ್ ಕಲಂ 194 ಅಡಿಯಲ್ಲಿ ದಾಖಲಿಸಲಾಗಿದೆ.
ಕಾಲ್ತುಳಿತದಿಂದ ಎಚ್ಚೆತ್ತಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ವೈಕುಂಠ ಏಕಾದಶಿಗೆ ಬೃಹತ್ ವ್ಯವಸ್ಥೆ ಕೈಗೊಳ್ಳಲು ಮುಂದಾಗಿದೆ. ದೀಪಾಲಂಕಾರ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಬದಲಾಯಿಸಲಾಗಿದೆ. HMPV ವೈರಸ್ ಹಿನ್ನೆಲೆಯಲ್ಲಿ ಭಕ್ತರು ಮಾಸ್ಕ್ ಧರಿಸಬೇಕು ಮತ್ತು ಟೋಕನ್ ಹೊಂದಿರುವವರಿಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಚಂದ್ರಬಾಬು ನಾಯ್ಡು ಪರಿಶೀಲನಾ ಸಭೆ ನಡೆಸಿದ್ದು, ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಟಿಟಿಡಿ ತಿರುಪತಿಯಲ್ಲಿ 94 ಕೌಂಟರ್‌ಗಳನ್ನು ಸ್ಥಾಪಿಸಿ, 1.20 ಲಕ್ಷ ಟೋಕನ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಜನವರಿ 10, 11, ಮತ್ತು 12ರಂದು ವೈಕುಂಠ ದ್ವಾರ ದರ್ಶನಕ್ಕಾಗಿ ಭಕ್ತರಿಗೆ ಟೋಕನ್ ನೀಡಲಾಗುತ್ತಿದೆ.
ಭಕ್ತರ ಹೆಚ್ಚಿನ ಸಂಖ್ಯೆಯಿಂದಾಗಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ನಿಖರ ಕ್ರಮಗಳನ್ನು ಕೈಗೊಳ್ಳಲಾಗುವುದು.