Bengaluru: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ (aerospace) ಪಾರ್ಕ್ ನಿರ್ಮಿಸಲು 1777 ಎಕರೆ ಭೂಮಿ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ಯೋಜನೆ ಮಾಡಿಕೊಂಡಿತ್ತು. ಆದರೆ ಇದೀಗ ಈ ಭೂಸ್ವಾಧೀನ ಪ್ರಕ್ರಿಯೆ ಅನ್ನು ಕೈಬಿಟ್ಟಿದೆ.
ಈ ಸುದ್ದಿಯ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಏರೋಸ್ಪೇಸ್ ಉದ್ಯಮಿಗಳಿಗೆ ಆಹ್ವಾನ ನೀಡಿದೆ. ಆಂಧ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಟ್ವೀಟ್ ಮಾಡಿ, “ಏರೋಸ್ಪೇಸ್ ಉದ್ಯಮದವರೇ, ನಿಮಗೆ ಆಂಧ್ರಪ್ರದೇಶದಲ್ಲಿಯೇ ಉತ್ತಮ ಅವಕಾಶಗಳಿವೆ. ಇಲ್ಲಿ ನಾವು ಆಕರ್ಷಣೀಯ ಪಾಲಿಸಿಗಳನ್ನು ಹಾಗೂ 8 ಸಾವಿರ ಎಕರೆ ಭೂಮಿಯನ್ನು ಉದ್ಯಮಕ್ಕಾಗಿ ಕಾಯ್ದಿರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರು ಟ್ವೀಟ್ ಮಾಡಿ, “ಉದ್ಯಮವನ್ನು ಆಕರ್ಷಿಸಲು, ಉದ್ಯೋಗ ಸೃಷ್ಟಿಸಲು ಇಚ್ಛಾಶಕ್ತಿ ಬೇಕು. ನಾರಾ ಲೋಕೇಶ್ ಅವರಿಂದ ಕಲಿಯಲು ಕರ್ನಾಟಕ ಸರ್ಕಾರ ಸಮಯವಾಗಿದೆ” ಎಂದು ಹೇಳಿದ್ದಾರೆ.
ಅದೇ ವೇಳೆ ಅವರು, “ಬೆಂಗಳೂರು ಈಗಾಗಲೇ HAL, NAL, DRDO, ISRO ಮತ್ತು ಖಾಸಗಿ ಕಂಪನಿಗಳ ಕೇಂದ್ರವಾಗಿದೆ. ಈ ಶಕ್ತಿ ಬಳಸಿ ಕರ್ನಾಟಕವೇ ಏರೋಸ್ಪೇಸ್ ಕ್ಷೇತ್ರದ ಮುಂಚೂಣಿಯಲ್ಲಿ ಇರಲಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.