Andhra Pradesh, India : ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ “ಮೋಂಥಾ” (Cyclone Montha) ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಮುಂದಿನ 24 ತಾಸುಗಳಲ್ಲಿ ಇನ್ನಷ್ಟು ಬಲ ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಚಂಡಮಾರುತವು ಆಂಧ್ರಪ್ರದೇಶದ ಕಾಕಿನಾಡ ಮತ್ತು ಮಚ್ಚಿಲಿಪಟ್ನಂ ನಡುವೆ ನಾಳೆ ಬೆಳಗಿನ ವೇಳೆಯಲ್ಲಿ ಭೂಮೀಸ್ಪರ್ಶ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ತುರ್ತು ಕ್ರಮಗಳು ಆರಂಭಗೊಂಡಿವೆ.
ಸರ್ಕಾರದ ನಿರ್ದೇಶನದಂತೆ ಕರಾವಳಿ ಪ್ರದೇಶಗಳ ಶಾಲೆ-ಕಾಲೇಜುಗಳು ಮುಚ್ಚಲಾಗಿದೆ. ಕಡಲ ತೀರದ ಹಳ್ಳಿಗಳಲ್ಲಿ ವಾಸಿಸುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಭೂಮೀಸ್ಪರ್ಶದ ಸಮಯದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 100–110 ಕಿಲೋಮೀಟರ್ ಇರಬಹುದು. ಕೆಲವು ಪ್ರದೇಶಗಳಲ್ಲಿ ತೀವ್ರ ಮಳೆಯ ಸಾಧ್ಯತೆ ಇದೆ.
ಒಡಿಶಾ ರಾಜ್ಯದ ಏಳು ಜಿಲ್ಲೆಗಳಿಗೆ “ರೆಡ್ ಅಲರ್ಟ್” ನೀಡಲಾಗಿದ್ದು, ಜನರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್‌ಡಿಆರ್‌ಎಫ್ (NDRF) ಹಾಗೂ ರಕ್ಷಣಾ ಪಡೆಗಳನ್ನು ನಿಯೋಜಿಸಿದ್ದು, ತುರ್ತು ನೆರವಿಗೆ ಸಜ್ಜಾಗಿವೆ. ಅಧಿಕಾರಿಗಳು ಜನರಿಗೆ “ಅಪಾಯಕಾರಿ ಪ್ರದೇಶಗಳಿಂದ ದೂರ ಉಳಿಯಿರಿ, ವಿದ್ಯುತ್ ಸಂಪರ್ಕಗಳನ್ನು ಕತ್ತರಿಸಿ ಸುರಕ್ಷಿತ ಸ್ಥಳದಲ್ಲಿ ಇರಿರಿ” ಎಂದು ಮನವಿ ಮಾಡಿದ್ದಾರೆ.







