New Delhi: ಉದ್ಯಮಿ ಅನಿಲ್ ಅಂಬಾನಿಯವರ (Anil Ambani) ಮೇಲೆ ಹಣಕಾಸು ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅವರು ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಆಗಸ್ಟ್ 5ರಂದು ದೆಹಲಿಯ ಇಡಿ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಂಬಾನಿಯವರಿಂದ ಇಡಿ ಅಧಿಕಾರಿಗಳು ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ನಕಲಿ ಬ್ಯಾಂಕ್ ಗ್ಯಾರಂಟಿಗಳ ಜಾಲವನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಭುವನೇಶ್ವರ್ ಮತ್ತು ಕೋಲ್ಕತಾದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
2017ರಿಂದ 2019ರ ನಡುವೆ ಯೆಸ್ ಬ್ಯಾಂಕ್, ಅನಿಲ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್‌ನ ಕಂಪನಿಗಳಿಗೆ ಸುಮಾರು ₹3,000 ಕೋಟಿ ರೂ ಸಾಲ ನೀಡಿತ್ತು. ಈ ಹಣವನ್ನು ನಿಗದಿತ ಉದ್ದೇಶಕ್ಕಾಗಿ ಉಪಯೋಗಿಸದೇ, ಬೇರೆ ಕಂಪನಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬುದು ಆರೋಪ.
ಇದಕ್ಕಾಗಿ ಶೆಲ್ ಕಂಪನಿಗಳನ್ನು ಬಳಸಲಾಗಿದೆ. ಅಲ್ಲದೆ ಯೆಸ್ ಬ್ಯಾಂಕ್ ನಿಯಮ ಪಾಲನೆ ಮಾಡದೇ ಸಾಲ ಮಂಜೂರು ಮಾಡಿರುವುದೂ ತಿಳಿದುಬಂದಿದೆ. ಸಾಲ ನೀಡುವ ಮೊದಲು ಕಂಪನಿಗಳ ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ.
ಯೆಸ್ ಬ್ಯಾಂಕ್ ಮಾತ್ರವಲ್ಲ, ಇತರ ಹಲವಾರು ಬ್ಯಾಂಕುಗಳು ಸಹ ಅಂಬಾನಿಯವರ ಕಂಪನಿಗಳಿಗೆ ಸಾಲ ನೀಡಿದ್ದವು. ಕಳೆದ ವರ್ಷದಿಂದ ಇಡಿ ಅಂಬಾನಿಯವರದಾದ ಹಲವು ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದೆ.
ಇಡಿಗೆ ಲಭಿಸಿರುವ ಮಾಹಿತಿ ಪ್ರಕಾರ, ಅನಿಲ್ ಅಂಬಾನಿ ಸುಮಾರು ₹20,000 ರಿಂದ ₹30,000 ಕೋಟಿ ಹಣವನ್ನು ವಿದೇಶಕ್ಕೆ ರವಾನಿಸಿರಬಹುದೆಂದು ಶಂಕೆ ವ್ಯಕ್ತವಾಗಿದೆ.







