Bengaluru: ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ಹಣ ಸಂಪಾದನೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಮುಂದುವರೆಸಿದೆ. ಈ ಹಿನ್ನೆಲೆ ಇಡಿ ಅಧಿಕಾರಿಗಳು ಅಕ್ಟೋಬರ್ 16ರಂದು ಬೆಂಗಳೂರು, ಹೊಸಪೇಟೆ, ಗುರುಗ್ರಾಮ ಸೇರಿ 20 ಸ್ಥಳಗಳಲ್ಲಿ ದಾಳಿ ನಡೆಸಿ, ಅಕ್ರಮ ರಫ್ತು ಮಾಡಿದ ಕಂಪೆನಿಗಳ ಬ್ಯಾಂಕ್ ಖಾತೆಗಳಲ್ಲಿ ಇದ್ದ 12.84 ಕೋಟಿ ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ. ಜೊತೆಗೆ 42 ಲಕ್ಷ ರೂ. ನಗದನ್ನೂ ವಶಕ್ಕೆ ಪಡೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಸಿಬಿಐ ನಡೆಸಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸಿಬಿಐ ತನಿಖೆಯಲ್ಲಿ ಕಳ್ಳಮಾರ್ಗದ ಮೂಲಕ ಕೋಟ್ಯಂತರ ರೂ. ಹಣ ವರ್ಗಾವಣೆ ನಡೆದಿರುವುದು ಬಹಿರಂಗವಾಯಿತು. ಇದನ್ನಾಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹೊಸ ತನಿಖೆ ಆರಂಭಿಸಿದೆ.
ತನಿಖೆಯಲ್ಲಿ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚು ಅದಿರು ಅಕ್ರಮವಾಗಿ ರಫ್ತು ಮಾಡಿದ ಆರು ಕಂಪೆನಿಗಳು ತೆರಿಗೆ ಹಾಗೂ ರಾಯಭಾರಿ ಪಾವತಿಸದೆ ಸರ್ಕಾರವನ್ನು ವಂಚಿಸಿರುವುದು ಪತ್ತೆಯಾಗಿದೆ. ತಪ್ಪು ಲೆಕ್ಕ ತೋರಿಸಿ ಕೋಟ್ಯಂತರ ರೂ. ಲಾಭ ಪಡೆದಿರುವುದಾಗಿ ಇಡಿ ಹೇಳಿದೆ.
ಅಕ್ರಮ ರಫ್ತಿನಲ್ಲಿ ಭಾಗಿಯಾಗಿರುವ ಕಂಪೆನಿಗಳ ಪಟ್ಟಿ
- ಎಂಎಸ್ಪಿಎಲ್ ಲಿಮಿಟೆಡ್ (ನರೇಂದ್ರ ಕುಮಾರ್)
- ಗ್ರೀನ್ ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿ. (ಅಜಯ್ ಖರ್ವಾಂಡ)
- ಶ್ರೀನಿವಾಸ್ ಮಿನರಲ್ಸ್ ಟ್ರೇಡಿಂಗ್ (ವೈ. ಶ್ರೀನಿವಾಸ್ ರಾವ್)
- ಅರ್ಷದ್ ಎಕ್ಸ್ಪರ್ಟ್ (ಎಂ.ಡಿ. ಆಸ್ಗರ್ ಖಾನ್)
- ಎಸ್ವಿಎಂ ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಲಿ. (ಬಸವರಾಜ್ ಬಿ)
- ಅಲ್ಫೇನ್ಸ್ ಮಿನಿಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿ. (ಗಗನ್ ಶುಕ್ಲಾ)
ಇವುಗಳೆಲ್ಲ ಸರ್ಕಾರಕ್ಕೆ ತೆರಿಗೆ ಪಾವತಿಸದೇ ಅಕ್ರಮವಾಗಿ ಅದಿರು ರಫ್ತು ಮಾಡಿ ಲಾಭ ಪಡೆದಿರುವುದಾಗಿ ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಬೇಲೆಕೇರಿ ಬಂದರಿನ ಮೂಲಕ ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಕಂಪೆನಿಯು ಆರೋಪಕ್ಕೆ ಗುರಿಯಾಗಿತ್ತು. ಈ ಪ್ರಕರಣದಲ್ಲಿ ಇಡಿ ಕಳೆದ ಸೆಪ್ಟೆಂಬರ್‌ನಲ್ಲಿ ಶಾಸಕರನ್ನೂ ಬಂಧಿಸಿತ್ತು.







