ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು (Asaram Bapu) 2013ರ ಆಗಸ್ಟ್ 31ರಂದು ಜೋಧ್‌ಪುರ ಪೊಲೀಸರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಜೋಧ್‌ಪುರ ಮತ್ತು ಗುಜರಾತ್ ನ್ಯಾಯಾಲಯಗಳು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿವೆ.
ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ವೈದ್ಯಕೀಯ ಕಾರಣಗಳಿಗಾಗಿ ಬಾಪುಗೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಾಕ್ಷ್ಯ ಹಾಳು ಮಾಡಬಾರದು ಮತ್ತು ಬೇರೆ ಯಾರನ್ನೂ ಭೇಟಿ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಬಾಪು ಹೃದ್ರೋಗಿಯಾಗಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಅವರು ಜೋಧ್‌ಪುರದ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ರಾಜಸ್ಥಾನ ಹೈಕೋರ್ಟ್ ಮತ್ತು ಡಿಸೆಂಬರ್ 2023ರಲ್ಲಿ ಅವರಿಗೆ ಪೆರೋಲ್ ಮಂಜೂರಾಗಿತ್ತು. ಜನವರಿ 1 ರಂದು ಅವರು ಜೈಲಿಗೆ ಮರಳಿದ್ದರು.
ಬಾಪುವಿನ ಜಾಮೀನಿನ ಅವಧಿಯಲ್ಲಿ ಭದ್ರತೆಯನ್ನು ಖಚಿತಪಡಿಸಲು ಸಿಬ್ಬಂದಿಯನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.