Delhi: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ (Land Scam case) ರಾಷ್ಟ್ರೀಯ ಜನತಾ ದಳದ (Rashtriya Janata Dal) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ (Lalu Prasad), ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ (Tejashwi Yadav and Tej Pratap Yadav) ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಆರ್ಜೆಡಿ ನಾಯಕರಿಗೆ ತಲಾ ₹ 1 ಲಕ್ಷ ವೈಯಕ್ತಿಕ ಬಾಂಡ್ನಲ್ಲಿ ಜಾಮೀನು ನೀಡಿದ್ದು, ತನಿಖೆಯ ಸಮಯದಲ್ಲಿ ಅವರನ್ನು ಬಂಧಿಸಲಾಗಿಲ್ಲ ಎಂದು ಗಮನಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 25 ರಂದು ನಡೆಯಲಿದೆ.
ಬಳಿಕ ಮಾತನಾಡಿರುವ ತೇಜಸ್ವಿ, ‘ರಾಜಕೀಯ ಪಿತೂರಿ ನಡೆಸಲಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ನಮಗೆ ಜಯ ಸಿಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭೂಮಿ ಪ್ರಕರಣ
ಲಾಲು ಪ್ರಸಾದ್ ಅವರು 2004 ರಿಂದ 2009 ರ ವರೆಗೆ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಧ್ಯಪ್ರದೇಶದ ಜಬಲ್ಪುರ ಮೂಲದ ರೈಲ್ವೆಯ ಪಶ್ಚಿಮ ಮಧ್ಯ ವಲಯದಲ್ಲಿ ಮಾಡಿದ ಗ್ರೂಪ್-ಡಿ ನೇಮಕಾತಿಗಳಿಗೆ ಸಂಬಂಧಿಸಿದಂತೆ ಲಾಲು ಕುಟುಂಬಕ್ಕೆ ಜಮೀನು ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.