ಆಸ್ಟ್ರೇಲಿಯಾ ಸರ್ಕಾರ (Australian government) 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ (Social media) ಉಪಯೋಗಿಸಲು ನಿಷೇಧ ಘೋಷಿಸಿದೆ. ಈ ನಿರ್ಧಾರದಲ್ಲಿ ಯೂಟ್ಯೂಬ್ ಸಹ ಒಳಗೊಂಡಿದೆ. ಮೊದಲಿಗೆ ಯೂಟ್ಯೂಬ್ “ನಾವು ಸಾಮಾಜಿಕ ಮಾಧ್ಯಮವಲ್ಲ” ಎಂದು ಹೇಳಿದರೂ, ಸರ್ಕಾರ ಅದನ್ನೂ ನಿಷೇಧದ ಪಟ್ಟಿಗೆ ಸೇರಿಸಿದೆ.
ಇದರಲ್ಲಿ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್ (ಹಳೆಯ ಟ್ವಿಟರ್), ಸ್ನ್ಯಾಪ್‌ಚಾಟ್ ಮತ್ತು ಇತರ ಮುಖ್ಯ ಸಾಮಾಜಿಕ ಮಾಧ್ಯಮಗಳು ಸೇರಿವೆ. ಈ ನಿಷೇಧದ ಹಿಂದೆ ಮಕ್ಕಳನ್ನು ಆನ್ಲೈನ್ ಅಪಾಯಗಳಿಂದ ರಕ್ಷಿಸುವ ಉದ್ದೇಶವಿದೆ ಎಂದು ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ತಿಳಿಸಿದ್ದಾರೆ.
ಅವರು ಮಾತನಾಡುತ್ತಾ, “ಈ ವೇದಿಕೆಗಳು ಮಕ್ಕಳಿಗೆ ಹಾನಿಕಾರಕವಾಗಿವೆ. ಕೆಲವು ಕೇಸ್‌ಗಳಲ್ಲಿ ಮಕ್ಕಳ ಜೀವವೂ ಹೋಗಿದೆ. ಹೀಗಾಗಿ ಈ ತೀರ್ಮಾನ ಅಗತ್ಯವಾಯಿತು,” ಎಂದು ಹೇಳಿದರು.
ಈ ನಿಯಮ ಜುಲೈ ಅಂತ್ಯದೊಳಗೆ ಜಾರಿಯಲ್ಲಿಗೆ ಬರುತ್ತದೆ. ತಂತ್ರಜ್ಞಾನ ಕಂಪನಿಗಳು ಕೂಡಲೇ 16 ವರ್ಷದೊಳಗಿನ ಮಕ್ಕಳ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕು. ಇಲ್ಲವಾದರೆ ₹437 ಕೋಟಿ (50 ಮಿಲಿಯನ್ ಡಾಲರ್) ದಂಡ ವಿಧಿಸಲಾಗುತ್ತದೆ.
ಹದಿಹರೆಯದ ಮಕ್ಕಳು ಇನ್ನು ಮುಂದೆ ಯೂಟ್ಯೂಬ್ ವೀಡಿಯೋ ವೀಕ್ಷಿಸಬಹುದಾದರೂ, ಖಾತೆ ಇಲ್ಲದೆ ಕಾಮೆಂಟ್ ಹಾಕುವುದು ಅಥವಾ ಪೋಸ್ಟ್ ಮಾಡುವುದು ಸಾಧ್ಯವಿಲ್ಲ.
ಆನ್ಲೈನ್ ಗೇಮಿಂಗ್, ಮೆಸೇಜಿಂಗ್ ಆ್ಯಪ್‌ಗಳು, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ಅಪ್ಲಿಕೇಶನ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ, ಏಕೆಂದರೆ ಅವು ಮಕ್ಕಳಿಗೆ ಹಾನಿಕಾರಕವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತೀರ್ಮಾನ ಜಾಗತಿಕವಾಗಿ ಗಮನ ಸೆಳೆದಿದ್ದು, ನಾರ್ವೆ ಈಗಾಗಲೇ ಇದೇ ರೀತಿಯ ನಿಯಮವನ್ನೇ ಜಾರಿಗೆ ತಂದಿದ್ದು, ಬ್ರಿಟನ್ ಕೂಡ ಆ ದಾರಿಯಲ್ಲಿ ನಡೆದು ಬರುತ್ತಿದೆ.
ಹೆಚ್ಚಿನ ಪೋಷಕರು ಈ ತೀರ್ಮಾನವನ್ನು ಮೆಚ್ಚಿದ್ದರೆ, ಕೆಲವರು ಇದನ್ನು “ಅತ್ಯಂತ ಕಠಿಣ” ನಿರ್ಧಾರವೆಂದು ಟೀಕಿಸಿದ್ದಾರೆ.